

ಮೈಸೂರು: ಯುವಜನರ ಸಬಲೀಕರಣ ಸಾಕಾರಗೊಳಿಸಲು ಕೇಂದ್ರ ಸರ್ಕಾರದ ನೀತಿ ಆಯೋಗ, ದೆಹಲಿಯ ಐಐಟಿಯ ಫೌಂಡೇಷನ್ ಫಾರ್ ಇನ್ನೋವೇಷನ್ ಆ್ಯಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್’ (ಎಫ್‌ಐಟಿಟಿ) ಸಂಸ್ಥೆಯು ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ವಿಷಯವಾಗಿ ರಾಷ್ಟ್ರೀಯ ಅಧ್ಯಯನ ನಡೆಸಲಿದೆ ಎಂದು ಎಫ್‌ಐಟಿಟಿ ಸಲಹೆಗಾರರಾದ ಡಾ.ಶಿಖಾ ಧವನ್ ಹೇಳಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವ ವಿದ್ಯಾಲಯ ವತಿಯಿಂದ ಶನಿವಾರ ನೀತಿ ಆಯೋಗ ಹಾಗೂ ಎಫ್‌ಐಟಿಟಿ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನರು ದೇಶದ ಭವಿಷ್ಯ. 2045ಕ್ಕೆ ವಿಕಸಿತ ಭಾರತ ನಿರ್ಮಾಣಕ್ಕೆ ಯುವಜನರು ಪ್ರಮುಖ ಪಾತ್ರ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಈ ಅಧ್ಯಯನವು ವಿದ್ಯಾರ್ಥಿ ಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಕೌಶಲ ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿದರು.
ಜಪಾನ್‌ನಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವ ನೀಡುತ್ತಾರೆ. ದೇಶದ ಭವಿಷ್ಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಅವರಿಗೆ ಜಪಾನ್‌ನಲ್ಲಿ ಹೆಚ್ಚಿನ ಗೌರವ ನೀಡಲಾಗುತ್ತದೆ. ನಮ್ಮಲ್ಲೂ ಅಂತಹ ಮನೋಭಾವನೆ ಬೆಳೆಯಬೇಕಾಗಿದೆ ಎಂದು ಹೇಳಿದರು
ಅನುದಾನದ ಕೊರತೆ, ಪ್ರಾಧ್ಯಾಪಕರ ಕೊರತೆ ನಡುವೆಯೂ ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡುತ್ತಿರುವುದು ಸಂತಸದ ವಿಚಾರ. ವಿದ್ಯಾರ್ಥಿಗಳು ತಮಗೆ ದೊರೆತ್ತಿರುವ ಅವಕಾಶಗಳನ್ನು ಬಳಕೆ ಮಾಡಿಕೊಂಡು ಉತ್ತಮ ಸಾಧನೆ ತೋರಬೇಕು. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಸೀಮಿತವಾಗದೆ ಸಮಸ್ಯೆ ಪರಿಹರಿಸುವ ಕಡೆಗೆ ಆಲೋಚಿಸಬೇಕು. ಉದ್ಯಮಶೀಲ ಚಿಂತನೆಗಳನ್ನು ಬೆಳೆಸಿಕೊಂಡು ಎತ್ತರಕ್ಕೆ ಬೆಳೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ನೀತಿ ಆಯೋಗ, ಎಫ್‌ಐಟಿಟಿ ಹಾಗೂ ಮೈಸೂರು ವಿಶ್ವವಿದ್ಯಾಲಯವು ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಕುರಿತಾದ ರಾಷ್ಟ್ರೀಯ ಅಧ್ಯಯನ ಕೈಗೊಳ್ಳುತ್ತಿರುವುದು ಸಂತಸದ ವಿಚಾರ. ಮೈಸೂರು ವಿಶ್ವವಿದ್ಯಾಲಯವು ಈ ಪ್ರತಿಷ್ಠಿತ ರಾಷ್ಟ್ರೀಯ ಅಧ್ಯಯನದಲ್ಲಿ ಭಾಗವಾಗಿರುವುದು ಹೆಮ್ಮೆಯ ವಿಚಾರ ಎಂದರು.
ದೇಶದ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆ ವಿಷಯವಾಗಿ ಅಧ್ಯಯನ ನಡೆಯಲಿದೆ. 18 ರಾಜ್ಯಗಳ 108 ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಈ ಉಪಕ್ರಮವು ಯುವಜನರ ಸಾಮರ್ಥ್ಯವನ್ನು ನಿರ್ಮಿಸುವ ಭಾರತದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಎಫ್‌ಟಿಟಿಯ ಮುಖ್ಯ ಗುರಿಯು ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು, ವ್ಯಾಪಾರಗಳನ್ನು ಶೈಕ್ಷಣಿಕ ಸಮುದಾಯದೊಂದಿಗೆ ಸಂಪರ್ಕಿಸುವ ಗುರಿ ಹೊಂದಿದೆ ಎಂದು ಹೇಳಿದರು.
ಸಂಶೋಧನೆಯನ್ನು ಪ್ರಾಯೋಗಿಕ ಅನ್ವಯಿಕೆಗಳಾಗಿ ಪರಿವರ್ತಿಸುವುದು, ಉದ್ಯಮ-ಅಕಾಡೆಮಿ ಸಹಯೋಗದ ಮೂಲಕ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು, ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಿರ್ವಹಿಸುವುದು, ಅಕಾಡೆಮಿಯಿಂದ ಉದ್ಯಮಕ್ಕೆ ತಂತ್ರಜ್ಞಾನವನ್ನು ವರ್ಗಾಯಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವ ವಿದ್ಯಾಲಯ ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ವಿಭಾಗದ ಡೀನ್ ಪ್ರೊ.ಜಿ.ಆರ್. ಜನಾರ್ಧನ, ಐಕ್ಯೂಎಸಿ ನಿರ್ದೇಶಕ ಪ್ರೊ.ಕೆ.ಎನ್. ಅಮೃತೇಶ್ ಇದ್ದರು.