ಕ್ರೀಡೆಯಿಂದ ದೈಹಿಕ ಆರೋಗ್ಯವೃದ್ಧಿ

udp-29-yashpal
Published on

ಉಡುಪಿ: ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕವಾಗಿ ಸದೃಢರನ್ನಾಗಿ ಮತ್ತು ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಅಜ್ಜರಕಾಡು ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪಿ.ಜಿ.ಎ.ವಿ ಹಾಲ್​ನಲ್ಲಿ ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್, ಲಯನ್ಸ್​ ಕ್ಲಬ್​ ಮಿಡ್​ಟೌನ್​, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ರೇಂರ್ಜಸ್​ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ರೆಡ್​ಕ್ರಾಸ್​ ವಿಭಾಗ, ತೆಂಕನಿಡಿಯೂರು ಸ್ಪೋಟ್ಸ್​ ಕ್ಲಬ್​ ಹಾಗೂ ಇಂಡಿಯನ್​ ರೆಡ್​ಕ್ರಾಸ್​ ಸೊಸೈಟಿ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಯುವಜನತೆ ಶಿಕ್ಷಣದ ಜೊತೆ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಹೆಚ್ಚು ತೊಡಗಿಸಿಕೊಳ್ಳಬೇಕು. ಜಿಲ್ಲೆಯು ಶೈಕ್ಷಣಿಕವಾಗಿ ಮುಂದಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ಕೂಡ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಬೇಕು. ಇದರೊಂದಿಗೆ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ಕುಂದಾಪುರ ರೆಡ್​ಕ್ರಾಸ್​ ಸೊಸೈಟಿಯ ಅಧ್ಯಕ್ಷ ಎಸ್​. ಜಯಕರ ಶೆಟ್ಟಿ ಮಾತನಾಡಿ, ಒಂದು ಯೂನಿಟ್​ ರಕ್ತದಿಂದ ಮೂರು ರೋಗಿಗಳ ಜೀವನವನ್ನು ಉಳಿಸಬಹುದಾಗಿದ್ದು, ವಿದ್ಯಾಥಿಗಳು ರಕ್ತದಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಡಾ. ಜಿ.ಶಂಕರ್​ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಎಸ್​. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯು ಬದುಕಿನ ಬಹಳ ಮುಖ್ಯ ಭಾಗವಾಗಿದ್ದು, ಚಿಕ್ಕಂದಿನಿಂದಲೇ ಕ್ರೀಡೆಯನ್ನು ಮೈಗೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​ ಅಧ್ಯಕ್ಷ ಹರಿಪ್ರಸಾದ್​ ರೈ, ಲಯನ್ಸ್​ ಕ್ಲಬ್​ ಮಿಡ್​ಟೌನ್​ ಉಡುಪಿ ಅಧ್ಯಕ್ಷ ಅನಂತಶೆಟ್ಟಿ, ತೆಂಕನಿಡಿಯೂರು ಸ್ಪೋಟ್ಸ್​ ಕ್ಲಬ್​ನ ಅಧ್ಯಕ್ಷ ಸುಶಾನ್​ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ನಿಕೇತನಾ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್​ ನಿರೂಪಿಸಿದರು. ದಿನೇಶ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net