ಮಹಿಳೆಯರು ಕ್ರೀಡಾಸಕ್ತಿ ಬೆಳೆಸಿಕೊಳ್ಳಲಿ: ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಪಾರ್ವತಿ ಕರೆ

National Sports Day Mandya
Published on

ಮಂಡ್ಯ: ಮಹಿಳೆಯರು ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕಿದೆ ಎಂದು ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಪಾರ್ವತಿ ಕಾಂತರಾಜ್ ಕರೆ ನೀಡಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಸ್ತ್ರೀರೋಗ ವಿಭಾಗದ ಮಮತೆಯ ಮಡಿಲು ಅಂಗಳದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಯೋಜಿಸಿದ್ದ ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆ ಮಾನಸಿಕ ಮತ್ತು ದೈಹಿಕ, ಸಾಮಾಜಿಕವಾಗಿ ಜವಾಬ್ದಾರಿಯುತ ನಡವಳಿಕೆ ರೂಢಿಸಿಕೊಳ್ಳಲು ಸಹಕಾರಿಯಾಗಿದೆ. ದೈನಂದಿನ ಬದುಕಿನಲ್ಲಿ ಕಷ್ಟ ನಷ್ಟಗಳನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಲು ಮತ್ತು ಅಹ್ಲಾದಕರವಾಗಿ ಮನಸ್ಸನ್ನು ಹೊಂದಲು ಕ್ರೀಡೆ ಸಹಕಾರಿಯಾಗಿದೆ. 75 ವರ್ಷದ ಈ ವಯಸ್ಸಿನಲ್ಲೂ ಪ್ರತಿನಿತ್ಯ ಕ್ರೀಡಾಸಕ್ತಿಯನ್ನು ಹೊಂದಿದ್ದು, ಕ್ರೆಡಾಂಗಣ ಮತ್ತು ಇನ್ನಿತರ ಸ್ಥಳಗಳಲ್ಲಿ ವ್ಯಾಯಾಮದಲ್ಲಿ ತಲ್ಲೀನಾಗುತ್ತೇನೆ. ಅದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

ಮಹಿಳೆಯರು ದೈನಂದಿನ ಬದುಕಿನಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಮಹಿಳೆಯರು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಕುಟುಂಬದ ಇತರೆ ಸದಸ್ಯರು ಅನುಕರಣೆ ಮಾಡುತ್ತಾರೆ. ಪ್ರತಿಯೊಬ್ಬರೂ ಒಂದಲ್ಲೊಂದು ವಿವಿಧ ರೀತಿಯ ವ್ಯಾಯಾಮಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ 140ಕ್ಕೂ ಹೆಚ್ಚು ಪದಕ ಗಳಿಸಿದ್ದೇನೆ. ಆದರೂ ಆಸಕ್ತಿ ಇನ್ನೂ ಕುಂದಿಲ್ಲ. ಪ್ರಪಂಚದ ಇತರೆ ರಾಷ್ಟ್ರಗಳಲ್ಲಿ ಕ್ರೀಡೆಗೆ ವಿಶೇಷವಾದಂತಹ ಕಾಳಜಿಯನ್ನು ಅಲ್ಲಿನ ಸರ್ಕಾರ ತೋರಿಸುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಬೇಕಾಗಿದೆ ಎಂದು ಹೇಳಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಅಥ್ಲೆಟಿಕ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ವ್ಯಕ್ತಿತ್ವ ಹೊಂದಿರುವ ಪಾರ್ವತಿ ಕಾಂತರಾಜು ಅವರು ಜೀವಿತಾವಧಿಯಲ್ಲಿ ಕ್ರೀಡೆಗೆ ಹೆಚ್ಚಿನ ಆಧ್ಯತೆ ನೀಡಿರುತ್ತಾರೆ. ಮಹಿಳೆಯರಿಗೆ ಕ್ರೆಡಾ ಮನೋಭಾವ ಬೆಳೆಯುವಂತಾಗಲು ಈ ದಿನದಂದು ಅಭಿನಂದಿಸಲಾಗುತ್ತಿದೆ ಎಂದು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಮಾತನಾಡಿ, ಕ್ರೀಡೆ ಮಹಿಳೆಯರಿಗೆ ಸ್ವಾವಲಂಬಿ ಜೀವನವನ್ನು ಸಾಧಿಸಲು ಸಾಧ್ಯವಾಗುತ್ತದೆ. ಬೇರೆ ಕ್ಷೇತ್ರಗಳಲ್ಲಿ ಮಹಿಳೆ ಸಾಧನೆ ತೋರಿದರೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷವಾದ ಕಾಳಜಿಯನ್ನು ತೋರಿಸಬೇಕಾಗುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಮಕ್ಕಳು ಮತ್ತು ಇತರೆ ಸದಸ್ಯರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದರು.

ಮಿಮ್ಸ್‌ನ ಶುಶ್ರೂಷಕಿಯರ ಅಧೀಕ್ಷಕ ಅಧಿಕಾರಿಗಳಾದ ತುಳಸಿ, ರೇಣು, ಬಾಲ್‌ಬ್ಯಾಡ್ಮಿಂಟನ್ ತರಬೇತುದಾರ ಯಶ್ವಂತ್, ಮಮತೆಯ ಮಡಿಲಿನ ರವಿ, ಎಂ.ಬಿ.ಸುರೇಶ್, ಶ್ರೀನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net