

ಮಂಡ್ಯ: ಯುವಕರು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಬೇಕಾದರೆ ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು ಸಲಹೆ ನೀಡಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರೋಟರಿ ಸಹಯೋಗದಲ್ಲಿ ಹಾಕಿ ಮಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದರು. ವಿವಿಧ ಕ್ರೀಡೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಕ್ರೀಡೆಯನ್ನು ಜನರ ದೈನಂದಿನ ಜೀವನದ ಭಾಗವಾಗಿಸುವ ಉದ್ದೇಶದಿಂದ ಸರ್ಕಾರ ಹಲವು ಅನುದಾನಗಳನ್ನು ನೀಡುತ್ತಿದ್ದು, ಕ್ರೀಡಾಸಕ್ತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರು ಮೂರು ಬಾರಿ ಒಲಿಂಪಿಕ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅವರ ಕಠಿಣ ಶ್ರಮದಿಂದ ಕ್ರೀಡೆಯಲ್ಲಿ ದೇಶಕ್ಕೆ ಗೌರವ ಸಿಕ್ಕದೆ. ಈ ಕಾರಣಕ್ಕಾಗಿಯೇ ಅವರ ಜನ್ಮದಿನವನ್ನು ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಕ್ರೀಡೆ ಎಂದರೆ ನಿಮ್ಮ ಮನಸ್ಸನ್ನು ಕೇಂದ್ರಿಕೃತದಲ್ಲಿ ಇಟ್ಟುಕೊಳ್ಳುವುದು ಎಂದರ್ಥ. ಹಾಗಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ತುಂಬಾ ಉಪಯುಕ್ತವಾಗಿದೆ. ಕ್ರೀಡೆಯು ಮಾನಸಿಕ ಹಾಗ ದೈಹಿಕವಾಗಿ ಆರೋಗ್ಯವಾಗಿರಲು ಸಹಕರಿಸುತ್ತದೆ. ಜತೆಗೆ ಕ್ರೀಡೆಯಿಂದ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ಸೈಕಲ್ ಚಾಂಪಿಯನ್ ಬ್ರಿಜೇಶ್, ಎನ್.ವೈ.ಕೆ ಲೆಕ್ಕಾಧಿಕಾರಿ ರವಿಚಂದ್ರನ್, ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ ಇತರರಿದ್ದರು.