

ವಿಜಯಪುರ: ಶಾರೀರಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ ಎಂದು ಮುಖ್ಯ ಗುರು ಎಂ.ಐ. ಬಿರಾದಾರ ಹೇಳಿದರು.
ಸ್ಥಳೀಯ ಆದರ್ಶ ನಗರದ ಎಕ್ಸಲಂಟ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ರಾಷ್ಟ್ರೀಯ ಕ್ರೀಡಾದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೈಹಿಕವಾಗಿ ಶ್ರಮವನ್ನು ನೀಡಬಲ್ಲ ಕೆಲಸ ಕಾರ್ಯಗಳು ಮತ್ತು ಕ್ರೀಡಾ ಚಟುವಟಿಕೆಗಳು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಗಳಲ್ಲಿ ಶಕ್ತಿಯನ್ನು ತುಂಬುತ್ತವೆ. ಶ್ರಮ ರಹಿತ ಮತ್ತು ಚಟುವಟಿಕೆಯಿಂದ ದೂರಾದ ಶರೀರವು ಬೇಗನೆ ಮುಪ್ಪಾಗುತ್ತದೆ. ಸೋಮಾರಿತನವನ್ನು ಬದಿಗಿಟ್ಟು ಸದಾ ಕ್ರೀಡೆಗಳಲ್ಲಿ ಭಾಗವಹಿಸಿ ಶಾರೀರಿಕ ಮತ್ತು ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ಧ ರಾಜಶೇಖರ ಕೌಲಗಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಊಟ ಉಪಚಾರಣೆಯಲ್ಲಿ ಸಮಯ ಪಾಲನೆ ಮಾಡಬೇಕು. ಸದಾ ಕೆಲಸದಲ್ಲಿ ನಿರತನಾಗಿರುವ ವ್ಯಕ್ತಿಯು ಉತ್ತಮ ಆರೋಗ್ಯವನ್ನು ಸಂಪಾದಿಸುತ್ತಾನೆ. ಅದಕ್ಕಾಗಿ ಪ್ರತಿಯೊಬ್ಬರು ಒಂದಿಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಆರ್.ಕೆ. ದೇಶಪಾಂಡೆ, ಶಿಕ್ಷಕ ಎಂ.ಎಚ್. ಹುಗ್ಗೆನ್ನವರ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಆರ್.ಎಚ್. ಮಾಳಿ, ಅವಿನಾಶ ಅವಟಿ, ಪಿ.ಬಿ. ಖೇಡಗಿ, ಎಸ್.ಎಂ. ಸೂರ್ಯವಂಶಿ, ಶ್ರೇಯಾ ಭೋಸಲೆ ಮತ್ತಿತರರಿದ್ದರು.
ಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ಯೋಗ, ಚದುರಂಗ ಮತ್ತು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.