

ಬಳ್ಳಾರಿ: ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರಿಗಿದ್ದ ಕ್ರೀಡೆಯ ಮೇಲಿನ ಪ್ರೀತಿ, ದೇಶಭಕ್ತಿ ಮತ್ತು ಅವರ ಸಾಧನೆ ನಮ್ಮ ನಿಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ವಿಜಯನಗರ ಶ್ರೀಕೃಷ್ಣದೇವರ ವಿಶ್ವವಿದ್ಯಾಲಯದ ಕುಲಪತಿ ಡಾ.ಸಾಹೇಬ ಅಲಿ ಎಚ್. ನಿರಗುಡಿ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಮಂಗಳವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ನಿಮಿತ್ತ ಜರುಗಿದ ಶಾಲಾಂತರ್ಗತ ಗುಡ್ಡಗಾಡು ಓಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ದಿಗ್ಗಜ ಆಟಗಾರನಿಗೆ ಗೌರವ ಸಲ್ಲಿಸಲು ಕೇಂದ್ರ ಸರ್ಕಾರವು 2012 ರಲ್ಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಇಂದಿಗೂ ಮುಂದುವರಿಸಿಕೊಂಡು ಬಂದಿದೆ ಎಂದರು.
ಮೇಜರ್ ಧ್ಯಾನ್‌ಚಂದ್ ಅವರು 1926 ರಿಂದ 1948 ರವರೆಗಿನ ತಮ್ಮ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದಾರೆ ಮತ್ತು ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಸುಮಾರು ಒಂದು ಸಾವಿರ ಗೋಲುಗಳನ್ನು ಗಳಿಸಿದ್ದಾರೆ.
1928, 1932,1936 ರಲ್ಲಿ ಮೂರು ಒಲಂಪಿಕ್ಸ್‌ಗಳಲ್ಲಿ ಭಾರತವು ಹಾಕಿಯಲ್ಲಿ ವಿಶೇಷ ಸ್ಥಾನ ದಾಖಲಿಸಲು ಧ್ಯಾನ್‌ಚಂದ್ ಅವರ ಪರಿಶ್ರಮ ಅಪಾರವಾಗಿದೆ ಎಂದು ಸ್ಮರಿಸಿದರು.
ಜರ್ಮನಿಯ ಹಿಟ್ಲರ್ ಅವರು, ಜರ್ಮನಿ ಪರವಾಗಿ ಆಟ ಆಡುವಂತೆ ಏನ್ನೆಲ್ಲ ಆಸೆಗಳನ್ನು ತೋರಿಸಿದರು ಕೂಡ ನನ್ನ ಜನ್ಮ ನೀಡಿದ ಭಾರತ ದೇಶವನ್ನು ಬಿಟ್ಟು ಅನ್ಯ ದೇಶಗಳ ಪರವಾಗಿ ನಾನು ಆಡಲಾರೆ ಎಂದು ತನ್ನ ದೇಶಪ್ರೇಮವನ್ನು ಮೆರೆದ ಮಹಾನ್ ಚೇತನ ಅವರಾಗಿದ್ದರು ಎಂದು ನುಡಿದರು.
ಅವರಿಗೆ 1956 ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು, ಇದು ಭಾರತದ ಮೂರನೇ ಅತಿದೊಡ್ಡ ನಾಗರಿಕ ಗೌರವವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೈಹಿಕ ಶಿಕ್ಷಣ ವಿಭಾಗದ ಡಾ.ಶಶಿಧರ್ ಕೆಲ್ಲೂರ ಮಾತನಾಡಿ, ಇಡೀ ದೇಶವೇ ಹೆಮ್ಮೆ ಪಡುವಂತಹ ಅಪ್ರತಿಮ ಹುಟ್ಟು ಪ್ರತಿಭಾವಂತ ಧ್ಯಾನ್‌ಚಂದ್ ಅವರ ಸಾಧನೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದರು.
ಇದೇ ವೇಳೆ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪದಕ ಮತ್ತು ಪಾರಿತೋಷಕಗಳನ್ನು ನೀಡಲಾಯಿತು.
ಸಹಾಯಕ ಪ್ರಾಧ್ಯಾಪಕ ಡಾ.ಸಂಪತ್ ಕುಮಾರ್, ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮರಾಗಿ, ಯೋಗ ಉಪನ್ಯಾಸಕ ಮಹೇಶ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.