ವಿಜ್ಞಾನ-ಅಧ್ಯಾತ್ಮ ಒಂದಕ್ಕೊಂದು ಪೂರಕ

23blk2
ಕರಡ್ಯಾಳ ಗುರುಕುಲದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ದಿನ ನಿಮಿತ್ತ ಏರ್ಪಡಿಸಿದ್ದ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಡಾ.ಶಶಿಶೇಖರ ಆರ್., ಮೋಹನರಡ್ಡಿ, ಬಸವರಾಜ ಮೊಳಕೀರೆ, ಡಾ.ರಾಜಶೇಖರ ಮಠಪತಿ ಇದ್ದರು.
Published on

ಭಾಲ್ಕಿ: ವಿಜ್ಞಾನ ಮತ್ತು ಅಧ್ಯಾತ್ಮ ಒಂದಕ್ಕೊಂದು ಪೂರಕವಾಗಿವೆ. ವಿಜ್ಞಾನದಿಂದ ತಂತ್ರಜ್ಞಾನದಲ್ಲಿ ಪ್ರಗತಿ ಸಾಧ್ಯವಾದರೆ, ಅಧ್ಯಾತ್ಮ ಮನುಷ್ಯನಲ್ಲಿ ಆಂತರಿಕ ಪ್ರಗತಿ ಸಾಧಿಸಲು ನೆರವಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಶುಕ್ರವಾರ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಹಯೋಗದಡಿ ಏರ್ಪಡಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರಗತಿಯಲ್ಲಿ ವಿಜ್ಞಾನದ ಕೊಡುಗೆ ದೊಡ್ಡದಿದೆ. ಅದರಂತೆ ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಅಧ್ಯಾತ್ಮ ಅಗತ್ಯವಿದೆ. ಈ ಎರಡೂ ಮನುಷ್ಯನ ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಇಸ್ರೋ ಸಂಸ್ಥೆ ನಿವೃತ್ತ ವಿಜ್ಞಾನಿ ಶಶಿಶೇಖರ್ ಆರ್. ಮಾತನಾಡಿ, ೨೦೨೩ರ ಆ.೨೩ರಂದು ಚಂದ್ರಯಾನ-೩ ಮಿಷನ್ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್‌ನ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಸಾಧಿಸಿತು. ಈ ಐತಿಹಾಸಿಕ ಸಾಧನೆಯೊಂದಿಗೆ ಚಂದ್ರನ ಮೇಲೆ ಇಳಿದ ನಾಲ್ಕನೇ ಮತ್ತು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಇಳಿದ ಮೊದಲ ರಾಷ್ಟ್ರವಾಗಿದೆ. ಈ ಮಹತ್ವದ ಸಾಧನೆಯನ್ನು ಗೌರವಿಸಲು ಪ್ರಧಾನಿ ನರೇಂದ್ರ ಮೋದಿ ಆ.೨೩ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದಾರೆ. ಹೀಗಾಗಿ ನಮ್ಮ ದೇಶ ಇಂದು ಮೊದಲನೇ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಆಡಳಿತಾಧಿಕಾರಿ ಮೋಹನರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜಶೇಖರ ಮಠಪತಿ, ಮಹೇಶರಡ್ಡಿ, ನಾಗೇಶ ಬಿರಾದಾರ್ ಇತರರಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಭೂಮಿಕಾ ನಿರೂಪಣೆ ಮಾಡಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು. ವಿದ್ಯಾರ್ಥಿನಿ ಸಮೀಕ್ಷಾ ಗುತ್ತೇದಾರ್ ವಚನ ಗಾಯನ ನಡೆಸಿಕೊಟ್ಟರು.

ಭಾರತ ವಿಜ್ಞಾನ-ತಂತ್ರಜ್ಞಾನ ಸಹಾಯದಿಂದ ಬಲಿಷ್ಠವಾಗಿ ಬೆಳೆಯುತ್ತಿದೆ. ಇದರಲ್ಲಿ ವಿಜ್ಞಾನಿಗಳ ಕೊಡುಗೆ ದೊಡ್ಡದಿದೆ. ಇಸ್ರೋದ ನಿವೃತ್ತ ವಿಜ್ಞಾನಿ ಡಾ.ಶಶಿಶೇಖರ ಆರ್. ಜೀವನ ಸರಳ ಮತ್ತು ಸಹಜತೆಯಿಂದ ಕೂಡಿದೆ. ಮಕ್ಕಳಲ್ಲಿ ವಿಜ್ಞಾನ-ತಂತ್ರಜ್ಞಾನದ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರಿಯ ಸ್ವಾಮೀಜಿ, ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net