

ಮಂಡ್ಯ: ಗಡಿ ಕಾಯುವ ಸೈನಿಕರು ಮತ್ತು ಅನ್ನ ನೀಡುವ ರೈತರು ದೇಶದ ಬೆನ್ನೆಲುಬು ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ನಗರದ ಸೇವಾಕಿರಣ ವೃದ್ಧಾಶ್ರಮ ಸಭಾಂಗಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ರಾಷ್ಟ್ರೀಯ ವೀರ ಯೋಧರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹುತಾತ್ಮ ವೀರ ಸೈನಿಕರಿಗೆ ಗೌರವ ನಮನ, ಸಾಧಕರಿಗೆ ಅಭಿನಂದನೆ, ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೈ ಜವಾನ್ ಜೈ ಕಿಸಾನ್ ನಮ್ಮ ರಕ್ತಗತವಾಗಿದೆ. ಜಗತ್ತಿನಲ್ಲಿ ನಿಜವಾದ ಹೀರೋಗಳು ಸಿನಿಮಾ ನಟರಲ್ಲ, ದೇಶ ಕಾಯುವ ಸೈನಿಕರು ಮತ್ತು ದೇಹಕ್ಕೆ ಅನ್ನ ನೀಡುವ ರೈತರು. ಜಗತ್ತಿನಲ್ಲಿ ಭಾರತದ ಸೈನ್ಯ 4ನೇ ಅತಿದೊಡ್ಡ ಸ್ಥಾನ ಪಡೆದಿದೆ. ದೇಶದಲ್ಲಿ ಪ್ರತಿ ವರ್ಷ ಸೈನ್ಯದ ನಿರ್ವಹಣೆಗಾಗಿ 64 ಸಾವಿರ ಬಿಲಿಯನ್ ಡಾಲರ್‌ನಷ್ಟು ಖರ್ಚುಮಾಡುತ್ತಿದೆ. ಸೈನಿಕರನ್ನು ಗೌರವಿಸುವ ಕಾರ್ಯ ಸದಾ ನಡೆಯಬೇಕು. ಅವರ ತ್ಯಾಗ ಹೋರಾಟದ ಫಲದಿಂದ ನಾವು ನೆಮ್ಮದಿಯಾಗಿದ್ದೇವೆ ಎಂದು ಹೇಳಿದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿದರು. ಮಾಂಡವ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಶಿವಕುಮಾರ್, ಕೃಷಿಕ ಲಯನ್ಸ್ ಸಂಸ್ಥೆ ನಿರ್ದೇಶಕಿ ನೀನಾ ಪಟೇಲ್, ಸೇವಾಕಿರಣ ಆಶ್ರಮದ ಮೇಲ್ವಿಚಾರಕ ರಾಜಣ್ಣ ಇತರರಿದ್ದರು.
ಇದೇ ವೇಳೆ ನಿವೃತ್ತ ಸೈನಿಕ ಸಂತೆಕಸಲಗೆರೆ ರವಿ, ರಾಷ್ಟ್ರೀಯ ಗಣರಾಜ್ಯೋತ್ಸವ ಪಥಸಂಚನಕ್ಕೆ ಆಯ್ಕೆಯಾಗಿದ್ದ ಆರ್.ಮಮತಾ ಮತ್ತು ಡಿ.ಎಂ.ವಿನುತಾ ಅವರನ್ನು ಅಭಿನಂದಿಸಲಾಯಿತು. ದೇಶಭಕ್ತಿ ಗೀತ ಗಾಯನ ನಡೆಯಿತು.