ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ: ಜಿಲ್ಲಾಧಿಕಾರಿ ಡಾ.ಕುಮಾರ ಕಿವಿಮಾತು

National Service Scheme Special Camp Mandya
Published on

ಮಂಡ್ಯ: ಬೇಸಾಯ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿ ವಿದ್ಯಾರ್ಥಿಗಳ ಪಾತ್ರ ದೊಡ್ಡದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ತಾಲೂಕಿನ ಚಿಕ್ಕಬಳ್ಳಿ-ಆನಸೋಸಲು ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕೃಷಿ ಮಹಾವಿದ್ಯಾಲಯ ವಿ.ಸಿ ಫಾರ್ಮ್ ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ಕೃಷಿ ವಿದ್ಯಾರ್ಥಿಗಳು ತಮ್ಮ ಆರ್ಥಿಕತೆಯನ್ನು ವೃದ್ಧಿಸಿಕೊಳ್ಳುವ ಬದಲು ಸಮಾಜದ ಕುರಿತು ಯೋಚಿಸಬೇಕು. ಆ ಮೂಲಕ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಒಂದು ಮಹತ್ತರವಾದ ಘಟ್ಟವಾಗಿದೆ. ತಮ್ಮ ಇಚ್ಚಾನುಸಾರ ಎನ್‌ಎಸ್‌ಎಸ್, ಎನ್‌ಸಿಸಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಂತಹ ಶಿಬಿರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತೆಯೇ ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಶಿಕ್ಷಣದ ಜತೆ ನಮ್ಮನ್ನು ನಾವು ಸಮುದಾಯದಲ್ಲಿ ತೋಡಗಿಸಿಕೊಳುವುದರ ಮೂಲಕ ಸಮಾಜದ ನಿಜವಾದ ಸಮಸ್ಯೆಗಳನ್ನು ಅರಿತುಕೊಳ್ಳುವುದು. ಮಾತ್ರವಲ್ಲದೆ ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಕೃಷ್ಣ, ನಿವೃತ್ತ ಎಸಿಎಫ್ ಎ.ಎಂ.ಅಣ್ಣಯ್ಯ, ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಲೋಕೇಶ್, ಸದಸ್ಯ ಕೃಷ್ಣ, ಮುಖಂಡರಾದ ವೆಂಕಟೇಶ್, ಮರೀಗೌಡ, ಶಂಕರೇಗೌಡ, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪ್ರವೀಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net