ರೈತರು ಬಯೋ ಎಥೆನಾಲ್‌ಗೆ ಒತ್ತು ನೀಡಲಿ: ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಸಲಹೆ

National Service Scheme Special Camp Mandya
Published on

ಮಂಡ್ಯ: ಜಿಲ್ಲೆಯಲ್ಲಿ ಬಯೋ ಎಥೆನಾಲ್ ಬಳಕೆಗೆ ರೈತರು ಹೆಚ್ಚು ಒತ್ತು ಕೊಡಬೇಕು ಎಂದು ಕೃಷಿ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಸಲಹೆ ನೀಡಿದರು.

ತಾಲೂಕಿನ ಚಿಕ್ಕಬಳ್ಳಿ-ಆನಸೋಸಲು ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯ ಸಹಯೋಗದಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಥೆನಾಲ್ ಬಳಕೆ ಮಾಡಲು ಜಿಲ್ಲೆ ಸೂಕ್ತವಾಗಿದೆ. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಬಯೋ ಪೆಟ್ರೋಲ್, ಬಯೋ ಡೀಸಲ್, ವಿದ್ಯುಚ್ಛಕ್ತಿ ರೈತರಿಂದ ಬರಬೇಕು ಎಂದು ತಿಳಿಸಿದರು.

ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಯುತ್ತದೆ. ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತಮ್ಮನ್ನು ತೋಡಗಿಸಿಕೊಳ್ಳುವುದರಿಂದ ಸಂತೋಷದ ಜತೆಗೆ ಅದಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ. ಎನ್‌ಎಸ್‌ಎಸ್ ಶಿಬಿರಗಳಲ್ಲಿ ಸ್ವಚ್ಛತೆ ಹಾಗೂ ಇತರೆ ವಿಶೇಷ ಕಾರ್ಯಕ್ರಮದ ಜತೆಗೆ ಉಪನ್ಯಾಸ ಕಾರ್ಯಕ್ರಮ ನಡೆಯುತ್ತವೆ. ಇಲ್ಲಿನ ಗ್ರಾಮಸ್ಥರು ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುತ್ತಾರೆ. ಎಲ್ಲವನ್ನು ಬಳಸಿಕೊಂಡು ವಿಶೇಷ ಶಿಬಿರ ಆಯೋಜನೆ ಮಾಡಿ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಸದಸ್ಯ ಮಂಗಲ ಎಂ.ಯೋಗೀಶ್ ಮಾತನಾಡಿ, ಎನ್‌ಎಸ್‌ಎಸ್ ಶಿಬಿರ ಭಾವೈಕ್ಯತೆಯ ತಾಣ. ವಿದ್ಯಾರ್ಥಿ ದೆಸೆಯಲ್ಲಿ ಎನ್‌ಎಸ್‌ಎಸ್‌ಗೆ ಸೇರ್ಪಡೆಯಾಗುವುದು ಒಳ್ಳೆಯದು. ಮೊಬೈಲ್ ಕ್ರಾಂತಿಯಿಂದ ಯುವ ಸಮುಹದಲ್ಲಿ ಆತ್ಮ ವಿಶ್ವಾಸದ ಕೊರತೆ ಕಾಡುತ್ತಿದೆ. ಯುವಕರ ದೇಶವಾಗಿರುವ ಭಾರತ 2030 ರ ಒಳಗೆ ವೃದ್ಧರ ದೇಶವಾದರೇ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪಿ.ಎಸ್.ಫಾತಿಮಾ ಮಾತನಾಡಿ, 1969ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ ಮೊದಲಿಗೆ 30 ವಿಶ್ವವಿದ್ಯಾಲಯಗಳಲ್ಲಿ ಇತ್ತು. ಪ್ರಸ್ತುತ 600ಕ್ಕೂ ಹೆಚ್ಚು ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಕೃಷ್ಣ, ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ನಿವೃತ್ತ ಆರೋಗ್ಯಾಧಿಕಾರಿ ಡಾ.ಸಿ.ಕೆ.ರವಿಶಂಕರ್, ಮುಖಂಡ ದೇವರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಎ.ಎನ್.ಕೃಷ್ಣ , ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ.ಪ್ರವೀಣ್, ಡಾ.ಸುಗೀತಾ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net