

ಮಂಗಳೂರು : ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ರಾಷ್ಟ್ರೀಯ ಮಟ್ಟದ ಸ್ಫರ್ಧೆ ಆಯೋಜನೆಯಿಂದ ಸ್ಮಾರ್ಟ್‌ಸಿಟಿಯ ಯೋಜನೆ ಸಾರ್ಥಕ್ಯ ಕಂಡಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ವತಿಯಿಂದ ಭಾರತೀಯ ಸ್ವಿಮ್ಮಿಂಗ್ ಫೆಡರೇಶನ್‌ನ ಸಹಯೋಗದಲ್ಲಿ ಮಂಗಳೂರು ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರ ನಡೆದ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ಹೊರತಾಗಿ ರಾಜ್ಯದ ಬೇರೆ ನಗರದಲ್ಲೂ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್ ಆಯೋಜನೆಗೊಂಡಿರುವುದು ವಿರಳ. ಆದರೆ ಇಂದು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ ಈಜುಸ್ಪರ್ಧೆ ನಡೆಯುತ್ತಿರುವುದು ಖುಷಿಯ ವಿಚಾರ. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟ, ಒಲಂಪಿಕ್‌ನಲ್ಲೂ ಸಾಧನೆ ಮಾಡಬೇಕಾದರೆ ಇಂತಹ ವೇದಿಕೆ ಅಗತ್ಯವಾಗಿ ಬೇಕು. ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್ ಕಾರ್ಯಕ್ರಮದ ವೈಭವದಿಂದ ಈ ಸ್ಟೇಡಿಯಂ ನಿರ್ಮಿಸಿದ ಆಶಯ ಈಡೇರಿದೆ. ಮಂಗಳೂರನ್ನು ಸ್ವಿಮ್ಮಿಂಗ್‌ಗೆ ಪರ್ಯಾಯ ಅಂತರರಾಷ್ಟ್ರೀಯ ತಾಣವಾಗಿ ಅಭಿವೃದ್ದಿಹೊಂದುತ್ತಿದೆ. ಪ್ರವಾಸೋದ್ಯಮದ ಜತೆಜತೆಗೂ ಕ್ರೀಡಾ ಕ್ಷೇತ್ರದಲ್ಲೂ ಮಂಗಳೂರು ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದರು.
ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ್ ಹೊಸೂರು ಮಾತನಾಡಿ, ಮಂಗಳೂರಿನ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆಯುವ ಈ ಸ್ಫರ್ಧಾಕಾರ್ಯಕ್ರಮ ಕೇವಲ ಪದಕ ಗೆಲ್ಲಲು ಇರುವ ಸ್ಫರ್ಧೆಯಾಗಬಾರದು, ಭವಿಷ್ಯದ ಕ್ರೀಡಾ ಸಾಧನೆಗೆ ಪ್ರೇರಣೆಯಾಗಬೇಕು. ಇಲ್ಲಿನ ಪ್ರತೀ ಅನುಭವವೂ ಭವಿಷ್ಯದ ಕ್ರೀಡಾಳುಗಳಿಗೆ ಪ್ರೇರಣೆ ನೀಡಲಿದೆ. ಭವಿಷ್ಯದಲ್ಲಿ ಭಾರತದ ಕ್ರೀಡಾಪಟುಗಳು ಹಲವಾರು ಒಲಂಪಿಕ್ ಸ್ಫರ್ಧೆಗಳನ್ನು ಎದುರಿಸಲಿದ್ದು, ಈ ಕ್ರೀಡಾಕೂಡ ಮಹತ್ತರ ಸ್ಥಾನಮಾನ ಕಲ್ಪಿಸಲಿ ಎಂದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್, ಮೇಯರ್ ಸುದೀರ್ ಶೆಟ್ಟಿ ಕಣ್ಣೂರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ಮಂಗಳೂರು ಸ್ಮಾರ್ಟ್‌ಸಿಟಿ ಎಂಡಿ ರಾಜು ಕೆ., ಜಿಲ್ಲಾ ಪಂಚಾಯಿತಿ ಸಿಇಓ ಡಾ. ಆನಂದ್ ಕೆ, ಎಸ್‌ಎಫ್‌ಐ ಉಪಾಧ್ಯಕ್ಷ ವಿರೇಂದ್ರ ನಾನಾವತಿ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಪಾಲಿಕೆ ಸದಸ್ಯೆ ರೇವತಿ, ಸಂಘಟಕರಾದ ಕಮಲೇಶ್ ನಾನಾವತಿ, ರಾಜ್ ಕುಮಾರ್, ನವೀನ್, ಶಿವಾನಂದ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
----------------
ಕರ್ನಾಟಕಕ್ಕೆ ರಾಷ್ಟ್ರ ಮಟ್ಟದ ಆತಿಥ್ಯ
ಕರ್ನಾಟಕದ ಒಲಿಂಪಿಯನ್ ಹಾಗೂ ಬ್ಯಾಕ್‌ಸ್ಟ್ರೋಕ್ ಈಜುಪಟು ಶ್ರೀಹರಿ ನಟರಾಜ್, ಬ್ಯಾಕ್‌ಸ್ಟ್ರೋಕ್ ಸ್ಪ್ರಿಂಟರ್ ಲಿಖಿತ್ ಎಸ್.ಪಿ. , ರಾಷ್ಟ್ರೀಯ ದಾಖಲೆ ಪಟು ಮತ್ತು ಫ್ರೀಸ್ಟೈಲ್ ಸ್ಪೆಷಲಿಸ್ಟ್ ಅನೀಶ್ ಗೌಡ ಅವರು ಭಾಗವಹಿಸುವ ದೇಶದ ಅತ್ಯಂತ ದೊಡ್ಡ ಈಜು ಚಾಂಪಿಯನ್‌ಶಿಪ್ ಇದಾಗಿದ್ದು, 2021ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ನ ಆತಿಥ್ಯವನ್ನು ಕರ್ನಾಟಕ ವಹಿಸಿಕೊಂಡಿತ್ತು. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಈ ಚಾಂಪಿಯನ್‌ಶಿಪ್ ನಡೆಯುತ್ತಿದೆ .ನಾಲ್ಕು ದಿನಗಳ ಈ ಚಾಂಪಿಯನ್‌ಶಿಪ್‌ನಲ್ಲಿ 31 ರಾಜ್ಯಗಳ ಖ್ಯಾತ ಈಜುಪಟುಗಳು ಭಾಗವಹಿಲಿದ್ದಾರೆ ಎಂದು ಈಜು ಚಾಂಪಿಯನ್‌ಶಿಪ್‌ನ ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ತಿಳಿಸಿದರು.