

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶಿಲಾಯುಗದಿಂದ ಇಲ್ಲಿಯವರೆಗೆ ನಾಗರಿಕರಾಗಿ ಬದುಕಲು ಸಾಧ್ಯವಾಗಿದ್ದು ವಿಜ್ಞಾನದಿಂದ. ವಿಜ್ಞಾನ ವಿಶ್ವಬ್ರಾಹ್ಮಣ ಶಿಲ್ಪಿಗಳ ಆನುವಂಶಿಕ ಕೊಡುಗೆಯಾಗಿದ್ದು, ಅವರು ಭಾರತೀಯ ನಾಗರೀಕತೆ ರುವಾರಿಗಳು ಎಂದು ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.
ಕಟಪಾಡಿ- ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ನೇತೃತ್ವದಲ್ಲಿ ಪಡುಕುತ್ಯಾರಿನಲ್ಲಿ ಭಾನುವಾರ ಆಯೋಜಿಸಿದ್ದ ‘ವಿಶ್ವಕರ್ಮ ಸಾಂಸ್ಕೃತಿಕ ಪರಂಪರೆಯ ನಿರ್ಮಾತೃ ಇತಿಹಾಸದ ಪುನರಾವಲೋಕನ- ಭವಿಷ್ಯದ ಅನಾವರಣ’ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮೂಡುಬಿದಿರೆ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್ ದಿಕ್ಸೂಚಿ ಭಾಷಣ ಮಾಡಿ, ಮಾನವ ಸಂಪನ್ಮೂಲ ಅಥವಾ ಯುವ ಸಂಪನ್ಮೂಲ ಅಭಿವೃದ್ಧಿ ಮಾಡಿದಾಗ ಮಾತ್ರ ನಾವು ಮುಂದುವರಿಯಲು ಸಾಧ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಹುಟ್ಟಿರುವುದು ವಿಶ್ವಕರ್ಮರಿಂದ. ನಮ್ಮ ವೃತ್ತಿಯಲ್ಲಿ ಹುಟ್ಟಿದ ತಂತ್ರಜ್ಞಾನವನ್ನು ಕೌಶಲಾತ್ಮಕವಾಗಿ ಬಳಸಿಕೊಂಡು ಯುವಪೀಳಿಗೆ ಸ್ಪರ್ಧಾತ್ಮಕ ಮಾರುಕಟ್ಟೆಗೆ ಒಗ್ಗುವಂತೆ ಬೆಳೆಯಬೇಕು ಎಂದರು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ತಮಿಳುನಾಡು ಪಾರಂಪರಿಕ ದೇವಾಲಯಗಳ ಸ್ಥಪತಿ ಶಿಲ್ಪಾಚಾರ್ಯ ಯು.ಕೆ.ಉಮಾಪತಿ ಆಚಾರ್ಯ ಕುಂಭಕೋಣಂ, ಇಂಡಿಯನ್ ವಿಶ್ವಕರ್ಮ ಆಫೀಸರ್ಸ್ ಬಿಜಿನೆಸ್ ಆ್ಯಂಡ್ ಪ್ರೊಫೆಶನಲ್ ಫೌಂಡೇಶನ್ ಅಧ್ಯಕ್ಷ ಬಿ.ಎನ್.ವಿ.ರಾಜಶೇಖರ ಹೈದರಾಬಾದ್, ಅಖಿಲ ಭಾರತ ಕುಶಲಕರ್ಮಿಗಳ ಒಕ್ಕೂಟ ಅಧ್ಯಕ್ಷ ಬಂಗಾರ್ ಬಾಬು, ಆನೆಗುಂದಿ ಸರಸ್ವತೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಸೂರ್ಯಕುಮಾರ್ ಹಳೆಯಂಗಡಿ, ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಗೋ ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಆಚಾರ್ ಕಂಬಾರು ಸ್ವಾಗತಿಸಿದರು. ವಿಚಾರ ಸಂಕಿರಣ ಸಂಯೋಜಕ ಮೈಸೂರು ಡಾ.ಶ್ರೀಕಂಠಾಚಾರ್ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ನಿರೂಪಿಸಿದರು. ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ ವಂದಿಸಿದರು.
ಮನುಷ್ಯನ ಬೆಳವಣಿಗೆಯ ಪ್ರತಿ ಹಂತದಲ್ಲಿ ದೊಡ್ಡ ಕೊಡುಗೆ ನೀಡಿದವರು ವಿಶ್ವಬ್ರಾಹ್ಮಣ ಶಿಲ್ಪಿಗಳು. ಅವರು ತಪಸ್ಸು ಮಾಡುವ ಮುಖಾಂತರ ಬದುಕಿಗೆ ಪೂರಕವಾಗಿರುವ ಎಲ್ಲವನ್ನೂ ಚಿಂತನೆ ಮಾಡಿ ಸಮಾಜಕ್ಕೆ ಒದಗಿಸಿಕೊಟ್ಟಿದ್ದಾರೆ. ಮೊದಲು ನಮ್ಮ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಮ್ಮ ಸಾಧಕರ ಪಟ್ಟಿಯನ್ನು ಚೆನ್ನಾಗಿ ಗಮನಿಸಿ ಅವರ ಸಾಧನೆ ನಮಗೆ ಪ್ರೇರಣೆಯಾಗಬೇಕು.ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ