

ಬೆಂಗಳೂರು: ಜ.11 ರಿಂದ 17ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ನಗರದ ಠಾಣಾ ವ್ಯಾಪ್ತಿಗಳಲ್ಲಿ ಸರಾಸರಿ ಪ್ರತಿದಿನ ೨೦೦ ಮಂದಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಪ್ರಮುಖ ವೃತ್ತಗಳಲ್ಲಿ ಅರಿವು ಮೂಡಿಸಲಾಗಿದ್ದು, ಈ ಉಪಕ್ರಮವು ನಿರಂತರವಾಗಿ ಮುಂದುವರಿಯಲಿದೆ.
೩೪,೫೨೧ ಮಂದಿ ತರಬೇತಿ:
ನಗರದಲ್ಲಿ ದೈನಂದಿನ ಸುಗಮ ಸಂಚಾರಕ್ಕೆ ನಗರ ಸಂಚಾರ ಪೊಲೀಸ್ ವಿಭಾಗವು ವ್ಯವಸ್ಥೆಯನ್ನು ಕಲ್ಪಿಸುವುದಲ್ಲದೇ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ನಗರದ ಥಣಿಸಂದ್ರದಲ್ಲಿರುವ ಸಂಚಾರ ತರಬೇತಿ ಮತ್ತು ಸುರಕ್ಷತಾ ಸಂಸ್ಥೆ ವತಿಯಿಂದ ಕಳೆದ ೨೦೨೩ ನೇ ಸಾಲಿನಲ್ಲಿ ಸಂಚಾರ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು ೩೪,೫೨೧ ಮಂದಿಗೆ ತರಬೇತಿ ನೀಡಲಾಗಿದೆ. ಈ ಪೈಕಿ ೨೭೧೩ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಚಾಲಕರು ಹಾಗೂ ೧೨,೬೩೭ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಸೇರಿ ಒಟ್ಟು ೩೪,೫೨೧ ಮಂದಿಗೆ ತರಬೇತಿ ನೀಡಿ ಜಾಗೃತಿ ಮೂಡಿಸಲಾಗಿದೆ ಎಂದು ಅನುಚೇತ್ ತಿಳಿಸಿದ್ದಾರೆ.