

ಮೈಸೂರು: ಜಿಪಿಐಇಆರ್ ರಂಗ ತಂಡದ ವತಿಯಿಂದ ಮಾ.27ರಿಂದ 31ರವರೆಗೆ ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ರಾಷ್ಟ್ರೀಯ ರಂಗೋತ್ಸವ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ಮೈಮ್ ರಮೇಶ್ ತಿಳಿಸಿದರು.
27ರಂದು ಸಂಜೆ 6 ಗಂಟೆಗೆ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ರಂಗ ಉತ್ಸವ ಉದ್ಘಾಟಿಸುವರು. ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸುವರು. ಹಿರಿಯ ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ, ನಟ ಅರುಣ್ ಸಾಗರ್, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.27 ರಂದು ಸಂಜೆ 7 ಗಂಟೆಗೆ ಕೇರಳ ತಂಡದಿಂದ ‘ಬಾವಲ್’ ಮಲಯಾಳಂ ನಾಟಕ, 28ರಂದು ಸಂಜೆ 5.30ಕ್ಕೆ ದೇವಾನಂದ್ ವರಪ್ರಸಾದ್ ತಂಡದಿಂದ ‘ತತ್ವಪದ ಗಾಯನ’, ಸಂಜೆ 7 ಗಂಟೆಗೆ ಜಿಪಿಐಇಆರ್ ತಂಡದಿಂದ ‘ಮಂಟೇಸ್ವಾಮಿ ’ ಕಥಾ ಪ್ರಸಂಗ, ಮಾ.29 ರಂದು ಸಂಜೆ 5.30ಕ್ಕೆ ಡಾ.ಮೈಸೂರು ಗುರುರಾಜ್ ಮತ್ತು ತಂಡದಿಂದ ತಂಬೂರಿ ಜಾನಪದ ಗಾಯನ, ಸಂಜೆ 7 ಗಂಟೆಗೆ ಉಡುಪಿಯ ಅಮೋಘ ತಂಡದಿಂದ ‘ರೈಲು ಭೂತ’ ತುಳು ನಾಟಕ ಪ್ರದರ್ಶನ ನಡೆಯಲಿದೆ. ಮಾ.30 ರಂದು ಸಂಜೆ 5.30ಕ್ಕೆ ವಾಸು ದೀಕ್ಷಿತ್ ಕಲೆಕ್ಟಿವ್ ಸಂಗೀತ ಕಾರ್ಯಕ್ರಮ, ಸಂಜೆ 7 ಗಂಟೆಗೆ ಸಕಲ್ ಜಾನಿ ಹೇ ನಾಥ್ ಎಂಬ ಹಿಂದಿ ನಾಟಕ, ಮಾ.31 ರಂದು ಸಂಜೆ 5.30ಕ್ಕೆ ಮಂಗಳೂರಿನ ತಂಡದಿಂದ ಸಿಂಗಾರಿ ಮೇಳಂ ತತ್ವಮಸಿ ಕಾರ್ಯಕ್ರಮ, ಸಂಜೆ 7 ಗಂಟೆಗೆ ಬೆಂಗಳೂರಿನ ರಂಗ ಪಯಣ ತಂಡದಿಂದ ನವರಾತ್ರಿಯ ಕೊನೆ ದಿನ ಕನ್ನಡ ನಾಟಕ ಪ್ರದರ್ಶನ ನಡೆಡೆಯಲಿದೆ ಎಂದರು.
ಸಂಚಾಲಕರಾದ ಎಂ.ಪಿ.ಹರಿದತ್ತ, ಡಾ.ಎಚ್.ಎಂ.ಕುಮಾರಸ್ವಾಮಿ, ಬಸವಣ್ಣ, ಲೋಹಿತ್ ಇದ್ದರು.