ಜನರ ಲೋಕಜ್ಞಾನ ಹೆಚ್ಚಿಸುವ ಪತ್ರಿಕೆಗಳು: ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಕಳವಳ

National Press Day Mandya
Published on

ಮಂಡ್ಯ: ಸಾಮಾಜಿಕ ಜಾಲತಾಣ ಹೆಚ್ಚಾದಂತೆ ದಿನಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಕಳವಳ ವ್ಯಕ್ತಪಡಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಅಸೋಷಿಯೆಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನ ಮತ್ತು ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಿದಿನ ಪತ್ರಿಕೆ ಓದುವುದರಿಂದ ಲೋಕಜ್ಞಾನ, ಆರೋಗ್ಯಮಾಹಿತಿ, ಸುಸ್ಥಿರ ಆರೋಗ್ಯ ಹೆಚ್ಚಾಗುತ್ತಿತ್ತು. ಇಂದಿಗೂ ಮುಂಜಾನೆ ಪತ್ರಿಕೆ ಓದದವರು ಏನೋ ಕಳೆದುಕೊಂಡವರ ರೀತಿ ಚಡಪಡಿಸುತ್ತಾರೆ. ಅಷ್ಟು ಆಸಕ್ತಿ ಪತ್ರಿಕೆಗಳ ಮೇಲೆ ಇರಿಸಿಕೊಂಡವರಿದ್ದಾರೆ ಎಂದು ನುಡಿದರು.

ಇಂದಿನ ಯುವಜನತೆ ಪತ್ರಿಕೆ ಓದುವ ಹವ್ಯಾಸದಿಂದ ದೂರ ಉಳಿದು, ಸಾಮಾಜಿಕ ಜಾಲತಾಣದೊಳಗೆ ಮುಳುಗಿದ್ದಾರೆ. ಪರಿಣಾಮ ಮಾನಸಿಕ ತೊಳಲಾಟ ಹಾಗೂ ಕಣ್ಣುಗಳ ಬೇನೆಗೆ ಒಳಗಾಗುತ್ತಿದ್ದಾರೆ. ಸ್ವತಂತ್ರ ಮತ್ತು ಮುಕ್ತ ಪತ್ರಿಕಾ ಮಾಧ್ಯಮವು ಪ್ರಬಲ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕಾ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು, ಪ್ರತಿ ವರ್ಷ ನ.16ರಂದು ರಾಷ್ಟ್ರೀಯ ಪತ್ರಿಕಾ ದಿನ ಹಾಗು ರಾಜ್ಯದಲ್ಲಿ ಕನ್ನಡ ಪತ್ರಿಕಾ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ, ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪತ್ರಕರ್ತರಾದ ಮತ್ತೀಕೆರೆ ಜಯರಾಂ, ಬಿ.ಪಿ.ಪ್ರಕಾಶ್, ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್, ಕಾರ್ಯಕ್ರಮ ಸಂಯೋಜಕ ಡಾ.ಎಚ್.ಎಸ್.ಶಿವರಾಜ್ ಇತರರಿದ್ದರು. ಇದೇ ವೇಳೆ ನಂಜಮ್ಮ ಮೋಟೆಗೌಡ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪತ್ರಕರ್ತ ಚೈತನ್ಯಕುಮಾರ್‌ಗೆ 5 ಸಾವಿರ ರೂ ನಗದಿನ ಜತೆಗೆ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net