ರಾಷ್ಟ್ರಮಟ್ಟದ ಪೊಲೀಸ್ ಕ್ರೀಡಾಕೂಟ: ಮೈಸೂರಿನ ಕೆಎಆರ್‌ಪಿ ಕಮಾಂಡೆಂಟ್ ಶೈಲೇಂದ್ರಗೆ ಚಿನ್ನದ ಪದಕ

National Police Games Mysore KARP Commandant Shailendra wins gold medal
Published on

ಮೈಸೂರು: ಹೈದರಾಬಾದ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 42ನೇ ಅಖಿಲ ಭಾರತ ಪೊಲೀಸ್ ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್ ಮತ್ತು ಮೌಂಟೆಡ್ ಪೊಲೀಸ್ ಡ್ಯೂಟಿಮೀಟ್‌ನಲ್ಲಿ ನಗರದ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ (ಕೆಎಆರ್‌ಪಿ) ಮೌಂಟೆಡ್ ಪೊಲೀಸ್ ಕಮಾಂಡೆಂಟ್ ವಿ. ಶೈಲೇಂದ್ರ ‘ಕಿಂಗ್ಸ್ ಪವರ್’ ಎಂಬ ಕುದುರೆಯೊಂದಿಗೆ ‘ಹ್ಯಾಕ್ಸ್’ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಹೈದರಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಯೋಜಿಸಿದ್ದ ಕ್ರೀಡಾಕೂಟದಲ್ಲಿ ದೇಶದ ವಿವಿಧ ಕೇಂದ್ರ ಪೊಲೀಸ್ ಸಂಸ್ಥೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳ 22 ತಂಡಗಳು, 605 ಪುರುಷ ಹಾಗೂ 14 ಮಹಿಳಾ ಸಿಬ್ಬಂದಿಗಳು ಭಾಗವಹಿಸಿದ್ದರು. ಡ್ರೆಸ್ಸೇಜ್, ಟೆಂಟ್ ಪೆಗ್ಗಿಂಗ್, ಶೋ ಜಂಪಿಂಗ್, ಮೆಡ್ಲೆ ರಿಲೇ, ಹ್ಯಾಕ್ಸ್, ಮೆಂಟಲ್ ಹಜಾರ್ಡ್ ಟೆಸ್ಟ್ ಇತ್ಯಾದಿ ವಿಭಾಗಗಳಲ್ಲಿ 311 ಕುದುರೆಗಳೊಂದಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಅತಿದೊಡ್ಡ ಕ್ರೀಡಾಕೂಟ ಇದಾಗಿದೆ.

ಚಿನ್ನದ ಪದಕ ವಿಜೇತ ವಿ.ಶೈಲೇಂದ್ರ ಅವರನ್ನು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅಭಿನಂದಿಸಿದರು. ‘ಮೈಸೂರು ಮೌಂಟೆಡ್ ಪೊಲೀಸ್ ತಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕ ಸಾಧನೆ ಮಾಡಿರು ವುದು ಹಾಗೂ 12 ವರ್ಷಗಳ ನಂತರ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ದೊರಕಿದ್ದು ಹೆಮ್ಮೆಯ ವಿಚಾರ’ ಎಂದು ರಮೇಶ್ ಬಾನೋತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net