

ಹುಬ್ಬಳ್ಳಿ : ಇಲ್ಲಿನ ಕೆಎಲ್ಇ ಸಂಸ್ಥೆಯ ಜಿ.ಕೆ. ಲಾ ಕಾಲೇಜಿನಲ್ಲಿ ಜುಲೈ 27 ಮತ್ತು 28ರಂದು ರಾಷ್ಟ್ರೀಯ ಸಂಧಾನ ಸ್ಪರ್ಧೆ-2024 ಆಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ , ದೇಶದ ವಿವಿಧ ಪ್ರದೇಶಗಳಿಂದ 22 ತಂಡಗಳು ಈ ಸ್ಪರ್ಧೆ ಭಾಗವಹಿಸುತ್ತಿವೆ ಎಂದು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಮುಂಬೈನ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯ ಮಂಡಳಿಯ ಅಧ್ಯಕ್ಷಾಧಿಕಾರಿ ಪಿ.ಎಸ್. ದಿನೇಶಕುಮಾರ ಕಾರ್ಯಕ್ರಮ ಉದ್ಘಾಟಿಸುವರು.
ಗೋವಾ ಪಣಜಿಯ ವಿ. ಎಂ. ಸಲ್ಗಾಂವಕರ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಬಿ. ಎಸ್. ಪಾಟೀಲ, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಗಂಗಾಧರ ಹೊಸಕೇರಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸುವ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಾಚ್ಛಾಪುರೆ ಬಹುಮಾನ ವಿತರಣೆ ಮಾಡಲಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವಿಭಾಗದ ನಿವೃತ್ತ ಡೀನ್ ಪ್ರೊ. ಜಿ. ಬಿ. ಪಾಟೀಲ ಹಾಗೂ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಐ. ಶಿಗ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ಕೆ.ಎಲ್.ಇ. ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಹಾಗೂ ಕೆ.ಎಲ್.ಇ. ಕಾನೂನು ಅಕಾಡೆಮಿಯ ಅಧ್ಯಕ್ಷ ಪ್ರೊ. ಜೆ.ಎಂ. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆಯನ್ನು ವಹಿಸುವರು ಎಂದು ತಿಳಿಸಿದರು.
ಹುಬ್ಬಳ್ಳಿಯ ಕೆ.ಎಲ್.ಇ. ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯವು ಇಡೀ ಉತ್ತರ ಕರ್ನಾಟಕದಲ್ಲಿಯೇ ವಿದ್ಯಾರ್ಥಿಗಳ ವಕೀಲರಾಗುವ ಆಕಾಂಕ್ಷೆಯನ್ನು ಈಡೇರಿಸುವಲ್ಲಿ ಮುಂಚೂಣಿಯಲ್ಲಿದೆ ವಿದ್ಯಾರ್ಥಿಗಳ ವೃತ್ತಿಪರ ಬೆಳವಣಿಗೆ ಹಾಗೂ ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕಾಗಿ ಪ್ರಚಲಿತ ವಿದ್ಯಮಾನಗಳ ಕುರಿತು ಸಮೆ್ಮೕಳನಗಳು, ಕಾರ್ಯುಗಾರಗಳು, ಸ್ಪರ್ಧೆಗಳು ಹಾಗೂ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಚಟುವಟಿಕೆಗಳು ವಿದ್ಯಾರ್ಥಿಗಳ ಜ್ಞಾನಮಟ್ಟ ವೃದ್ಧಿಸುವ ಜತೆಗೆ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿವೆ ಎಂದರು.
ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಪರ್ಯುಯ ವಿವಾದ ಪರಿಹಾರ ಕಾರ್ಯವಿಧಾನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂಧಾನಕಾರರು, ಮಧ್ಯವರ್ತಿಗಳು ಹಾಗೂ ಮಧ್ಯಸ್ಥರಾಗಲು ತರಬೇತಿ ನೀಡುವುದು ಪ್ರಸ್ತುತ ದಿನಗಳಲ್ಲಿ ಅಗತ್ಯವಾಗಿರುವುದರಿಂದ ಈ ಅಕಾಡೆಮಿಯ ಆಶ್ರಯದಲ್ಲಿ ಮಹಾವಿದ್ಯಾಲಯವು ರಾಷ್ಟ್ರೀಯ ಸಂಧಾನ ಸ್ಪರ್ಧೆಯನ್ನು ಪ್ರತಿ ವರ್ಷ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದರು.