ರಾಷ್ಟ್ರೀಯ ಅಣುಕು ನ್ಯಾಯಾಲಯಕ್ಕೆ ಚಾಲನೆ

National moot court competition began
Published on

ಮೈಸೂರು: ಯಾವುದೇ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದನ್ನು ಮತ್ತೊಬ್ಬರಿಗೆ ಸರಿಯಾಗಿ ಅರ್ಥೈಸುವ ಕಲೆಯನ್ನು ಯುವ ವಕೀಲರು ಬೆಳೆಸಿಕೊಳ್ಳಬೇಕು ಎಂದು ಭೂಪಾಲ್‌ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ಸೂರ್ಯಪ್ರಕಾಶ್ ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಕಾರ್ಪೋರೇಟ್ ಕಾನೂನು ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಣುಕು ನ್ಯಾಯಾಲಯ ಸ್ಪರ್ಧೆ ಯದ್ಘಾಟಿಸಿ ಮಾತನಾಡಿ, ನಾವು ಅರ್ಥಮಾಡಿಕೊಂಡಿರುವ ವಿಷಯವನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ತಮ್ಮ ವಾದವನ್ನು ಮಂಡಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯ ಪ್ರಕರಣಗಳಲ್ಲಿ ಸೋಲುಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ಹೇಳಿದರು.

ಕಾನೂನು ಮತ್ತು ಜೀವನದ ನಡುವೆ ದೊಡ್ಡ ವ್ಯತ್ಯಾಸವೇನು ಇಲ್ಲ. ನ್ಯಾಯಾಲಯದಲ್ಲಿ ನಮ್ಮ ಕಕ್ಷಿದಾರರ ಪರವಾಗಿ ವಾದಿಸುತ್ತೇವೆ. ಅದೇ ರೀತಿ ಜೀವನದಲ್ಲಿ ಯಾರೇ ಆದರೂ ತಮ್ಮ ಗುರಿ ಸಾಧನೆಗೆ ಅಥವಾ ತಮಗೆ ಬೇಕಾದದ್ದನ್ನು ಪಡೆಯಲು ಮತ್ತೊಬ್ಬರ ಎದುರು ಸಮರ್ಥವಾಗಿ ವಿಷಯ ಪ್ರಸ್ತುತ ಪಡಿಸಿದಾಗ (ವಾದ) ಮಾತ್ರ ಬೇಕಾದದ್ದನ್ನು ಪಡೆಯಲು ಸಾಧ್ಯ. ಮಗುವೊಂದು ತನಗೆ ಬೇಕಾದದ್ದು ತಾಯಿಯಿಂದ ಪಡೆಯುವುದು ಸಹ ಒಂದು ಅತ್ಯುತ್ತಮವಾದ ಪ್ರಸ್ತುತಿಯಾಗಿದೆ. ಹೀಗಾಗಿ ವಕೀಲ ವೃತ್ತಿಗೆ ಕಾಲಿರಿಸಿರುವವರು ಅತ್ಯುತ್ತಮವಾಗಿ ವಿಷಯವನ್ನು ಪ್ರಸ್ತುತ ಪಡಿಸಲು ಕಲಿತಾಗ ಮಾತ್ರ ವೃತ್ತಿ ಜೀವನದಲ್ಲಿ ಯಶಸ್ವು ಕಾಣಲು ಸಾಧ್ಯ. ಇದರೊಂದಿಗೆ ಉತ್ತಮ ಕೌಶಲ್ಯ ಹಾಗೂ ಭರವಸೆ ಇರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಭೂಪಾಲ್‌ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವಿ.ವಿಜಯಕುಮಾರ್, ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್, ಪ್ರಾಂಶುಪಾಲ ಡಾ.ಎಸ್. ನಟರಾಜು, ಸುರಾನ ಆ್ಯಂಡ್ ಸುರಾನ ಸಂಸ್ಥೆಯ ಮುಖ್ಯಸ್ಥ ಪ್ರೀತಮ್ ಸುರಾನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net