ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥಕ್ಕೆ ಅವಕಾಶ

Judge 1
Published on

ಜಿಲ್ಲಾ ನ್ಯಾಯಾಧೀಶ ಕಿರಣ ಎಸ್​. ಗಂಗಣ್ಣನವರ್​ ಮಾಹಿತಿ

ಉಡುಪಿ ಜಿಲ್ಲೆಯಲ್ಲಿ ಸೆ.13ರಂದು ಲೋಕ ಅದಾಲತ್​

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯಾದ್ಯಂತ ಸೆ.13ರಂದು ಈ ವರ್ಷದ 2ನೇ ರಾಷ್ಟ್ರೀಯ ಲೋಕ ಅದಾಲತ್​ ಆಯೋಜಿಸಲಾಗಿದ್ದು, ಉಡುಪಿ ಜಿಲ್ಲೆಯಲ್ಲೂ ನಡೆಯಲಿದೆ. ಸದರಿ ಲೋಕ ಅದಾಲತ್​ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳೊಂದಿಗೆ ಈ ಬಾರಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಸಹ ಇತ್ಯರ್ಥ ಮಾಡಲಾಗುವುದು ಎಂದು ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ ಎಸ್​. ಗಂಗಣ್ಣನವರ್​ ಮಾಹಿತಿ ನೀಡಿದರು.

ಉಡುಪಿಯ ಜಿಲ್ಲಾ ನ್ಯಾಯಾಲಯದ ಕಾನ್ಫರೆನ್ಸ್​ ಹಾಲ್​ನಲ್ಲಿ ಸೆಪ್ಟೆಂಬರ್ 8ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರು ರಾಜೀ ಮೂಲಕ ಹಳೆಯ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದರು.

ವ್ಯಾಜ್ಯ ನಿವಾರಣೆಗೆ ಶ್ರಮ

ಮಹಾಭಾರತದಲ್ಲಿ ಕೌರವರು-ಪಾಂಡವರ ನಡುವೆ ಇದ್ದ ವ್ಯಾಜ್ಯಕ್ಕೆ ಸಂಬಂಧಿಸಿ ಶ್ರೀಕೃಷ್ಣ ಸಂಧಾನ ಮಾಡಿದ ರೀತಿಯಲ್ಲೇ ಲೋಕ ಅದಾಲತ್​ನಲ್ಲಿ ಕಕ್ಷಿದಾರರ ಮನ ಒಲಿಸಿ ವ್ಯಾಜ್ಯ ನಿವಾರಣೆ ಮಾಡಲಾಗುವುದು. ಅದಕ್ಕಾಗಿಯೇ ತಟಸ್ಥ ಇರುವಂತಹ ಹಾಗೂ ತರಬೇತಿ ಹೊಂದಿದ ವಕೀಲರನ್ನು ಮಧ್ಯವರ್ತಿ (ಮೀಡಿಯೇಟರ್​)ಗಳಾಗಿ ನಿಯೋಜಿಸಿ ಕಾನೂನು ರೀತಿಯಲ್ಲಿ ವ್ಯಾಜ್ಯ ನಿವಾರಣೆಗೆ ಶ್ರಮಿಸಲಾಗುವುದು ಎಂದರು.

 ಸೆ.12 ಕೊನೆಯ ದಿನ

ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಇ-ಚಲನ್​ ಪ್ರಕರಣಗಳನ್ನು ದಂಡ ಭರಿಸಿ ನಿವಾರಿಸಿಕೊಳ್ಳಬೇಕು. ರಾಜ್ಯಾದ್ಯಂತ ಇಂತಹ ಪ್ರಕರಣಗಳಿಗೆ ದಂಡ ಪಾವತಿಯಲ್ಲಿ ಶೇ.50 ರಿಯಾಯಿತಿ ನೀಡಲಾಗಿದ್ದು, ಅದು ಸೆ.12ಕ್ಕೆ ಅಂತ್ಯವಾಗಲಿದೆ. ಇಂತಹ ಸಣ್ಣಪುಟ್ಟ ಪ್ರಕರಣಗಳಿಗೆ ಕೋರ್ಟ್​ ಮೆಟ್ಟಿಲೇರಿದರೆ ನ್ಯಾಯಾಲಯದ ಸಮಯವೂ ವ್ಯರ್ಥವಾಗಲಿದೆ ಎಂದರು ನ್ಯಾಯಾಧೀಶ ಗಂಗಣ್ಣನವರ್.

1,993 ಕೇಸ್​ ನಿಗದಿ

ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮನು ಪಟೇಲ್​ ಮಾತನಾಡಿ, ಈ ಹಿಂದೆ ನಡೆದ ವರ್ಷದ ಪ್ರಥಮ ಲೋಕ ಅದಾಲತ್​ನಲ್ಲಿ ವಿವಿಧ ಪ್ರಕರಣ ಹಾಗೂ ವ್ಯಾಜ್ಯಗಳಿಗೆ ಸಂಬಂಧಿಸಿ ಒಟ್ಟು 48,120 ಕೇಸ್​ ಇತ್ಯರ್ಥವಾಗಿತ್ತು. ಜಿಲ್ಲೆಯಲ್ಲಿ ಈಗ ಒಟ್ಟು 36,070 ಪ್ರಕರಣ ಬಾಕಿ ಇದ್ದು, ರಾಜಿಯಾಗಬಲ್ಲಂತಹ 5,581 ಕೇಸ್​ ಗುರುತಿಸಲಾಗಿದೆ. ಇದರಲ್ಲಿ 1,993 ಪ್ರಕರಣಗಳನ್ನು ಈ ಅದಾಲತ್​ನಲ್ಲಿ ಇತ್ಯರ್ಥ ಮಾಡಲಾಗುವುದು. ಈ ಸಂಖ್ಯೆ ಇನ್ನೂ ಹೆಚ್ಚಳವಾಗಬಹುದು ಎಂದರು.

ಖಾಯಂ ಜನತಾ ನ್ಯಾಯಾಲಯ ವ್ಯವಸ್ಥೆ

ರಾಷ್ಟ್ರೀಯ ಲೋಕ ಅದಾಲತ್​ ಅಷ್ಟೇ ಅಲ್ಲದೆ, ಖಾಯಂ ಜನತಾ ನ್ಯಾಯಾಲಯ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಈ ಮೊದಲು ದಕ ಜಿಲ್ಲೆ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯ ವ್ಯಾಜ್ಯಗಳನ್ನು ನಿವಾರಿಸಲು ಮಂಗಳೂರಿನಲ್ಲಿ ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. ಈ ಕೋರ್ಟ್​ನಲ್ಲಿ ಯಾವಾಗ ಬೇಕಾದರೂ ವ್ಯಾಜ್ಯ ಪರಿಹರಿಸಿಕೊಳ್ಳಬಹುದಾಗಿದೆ. ಮೂರು ಜಿಲ್ಲೆಯ ಸಾರ್ವಜನಿಕರಿಗೆ ವಿಚಾರಣೆ ಎದುರಿಸಲು ಮಂಗಳೂರಿಗೆ ಬರಲು ಬಹಳ ದೂರವಾಗುತ್ತದೆ. ಹೀಗಾಗಿ ಈ ವರ್ಷದ ಜು.5ರಂದು ಈ ನಾಲ್ಕೂ ಜಿಲ್ಲೆಗಳಲ್ಲಿ ಖಾಯಂ ಜನತಾ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ. ಜಿಲ್ಲಾ ನ್ಯಾಯಾಲಯದಲ್ಲೇ ನಿರ್ದಿಷ್ಟ ದಿನ ನಿಗದಿ ಮಾಡಿಕೊಂಡು ಮಂಗಳೂರು ಪೀಠದ ನ್ಯಾಯಾಧೀಶರ ಉಪಸ್ಥಿಯಲ್ಲಿ ವ್ಯಾಜ್ಯ ಇತ್ಯರ್ಥ ಮಾಡಿಕೊಳ್ಳುವ ಇನ್ನೊಂದು ಅವಕಾಶವಿದೆ ಎಂದು ನ್ಯಾ.ಕಿರಣ ಎಸ್​. ಗಂಗಣ್ಣನವರ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net