ಸೆ.13ರಂದು ರಾಷ್ಟ್ರೀಯ ಲೋಕ ಆದಾಲತ್

ctd pdj
Published on

ಚಿತ್ರದುರ್ಗ: ಸುಪ್ರೀಂಕೋರ್ಟ್ ನಿರ್ದೇಶನದಂತೆ ಸೆ.13ರಂದು ರಾಷ್ಟ್ರೀಯ ಲೋಕ ಆದಾಲತ್ ಜರುಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್ ವಾಸುದೇವ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಜುಲೈ 1ರಿಂದ ಪ್ರಾರಂಭವಾಗಿರುವ ವಿಶೇಷ ಮಧ್ಯಸ್ಥಿಕೆ ಅಭಿಯಾನ ಅಕ್ಟೋಬರ್ 7 ರವರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 90 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ 1015 ಪ್ರಕರಣಗಳನ್ನು ಗುರುತಿಸಲಾಗಿದೆ. 51 ಮಧ್ಯಸ್ಥಿಕೆದಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಉಭಯ ಕಕ್ಷಿದಾರರಿಗೆ ಕಾನೂನಾತ್ಮಕ ಸಹಕಾರ ನೀಡಲಿದ್ದಾರೆ. ಈವರೆಗೆ 18 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ, ತಾಲೂಕು ಹಂತದ ನ್ಯಾಯಾಲಯಗಳಲ್ಲಿರುವ ಕೌಟುಂಬಿಕ, ಅಪಘಾತ ವಿಮೆ, ಚೆಕ್‌ಅಮಾನ್ಯ, ವಾಣಿಜ್ಯ, ಗ್ರಾಹಕರ ವ್ಯಾಜ್ಯಗಳು, ಸಾಲ ವಸೂಲಿ, ಆಸ್ತಿ ವಿಭಾಗ, ಭೂಸ್ವಾಧೀನ ಸೇರಿ ಎಲ್ಲ ರೀತಿಯ ಸಿವಿಲ್ ಪ್ರಕರಣಗಳನ್ನು ಮಧ್ಯಸ್ಥಿಕೆ ಮುಖಾಂತರ ಇತ್ಯರ್ಥಪಡಿಸಿಕೊಳ್ಳಲು ಅಭಿಯಾದಡಿ ಅವಕಾಶವಿದೆ ಎಂದು ತಿಳಿಸಿದರು.

ಮಧ್ಯಸ್ಥಿಕೆದಾರರ ಸಮಕ್ಷಮ ರಾಜಿ ಕಾನೂನಾತ್ಮಕ ಹಾಗೂ ನ್ಯಾಯವಾಗಿವೆಯೇ ಎಂಬುದನ್ನು ಪರಿಶೀಲಿಸಿ ನ್ಯಾಯಾಲಯ ಅಧಿಕೃತವಾಗಿ ಸಮ್ಮತಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಿದೆ. ಹೆಚ್ಚುತ್ತಿರುವ ವಿವಾಹ ವಿಚ್ಛೇದನದ ಪ್ರಕರಣಗಳೆಡೆ ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು, ಪ್ರತಿ ಲೋಕ ಅದಾಲತ್‌ನಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳನ್ನು ಒಂದು ಮಾಡಲಾಗಿದೆ ಎಂದರು.

ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕ್, ಬಿಎಸ್‌ಎನ್‌ಎಲ್,ಬೆಸ್ಕಾಂ, ನಗರಸಭೆಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಿರುತ್ತವೆ. ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಬ್ಯಾಂಕ್ ಸಾಲ, ಬಡ್ಡಿ, ಬಿಲ್‌ಗಳ ಪಾವತಿಯಲ್ಲಿ ರಿಯಾಯಿತಿ ದೊರೆಯುವಂತಾಗಿದೆ. ವಿಚ್ಚೇದನ ಪ್ರಕರಣಗಳೊಂದಿಗೆ ಜೀವನಾಂಶ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣಿ ಪ್ರಕರಣಗಳು ತಳುಕು ಹಾಕಿಕೊಂಡಿರುತ್ತವೆ. ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಿರಂತರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಲೋಕ ಅದಾಲತ್

ಕಳೆದ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ 50 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ 4,321ನ್ನು ವಿಲೇವಾರಿ ಮಾಡಲಾಗಿದೆ. ಇದರೊಂದಿಗೆ 99,272 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 1.03 ಲಕ್ಷ ಪ್ರಕರಣಗಳು ವಿಲೇವಾರಿಯಾಗಿವೆ. ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದ 6 ಜೋಡಿಗಳನ್ನು ಒಂದು ಮಾಡಲಾಗಿದೆ ಎಂದರು.

ಉಭಯ ಕಕ್ಷಿದಾರರು ಅಭಿಯಾನ ಹಾಗೂ ಲೋಕ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net