ಮಾ.8ರಂದು ರಾಷ್ಟ್ರೀಯ ಲೋಕ ಅದಾಲತ್: ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾಹಿತಿ

National Lok Adalat on March 8th Mandya
Published on

ಮಂಡ್ಯ: ಕಾನೂನು ಸೇವೆಗಳ ಪ್ರಧಿಕಾರದ ವತಿಯಿಂದ ಮಾ.8ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಏಳು ತಾಲೂಕಿನಲ್ಲಿಯೂ ನಡೆಯಲಿದೆ. ಇದಕ್ಕೆ ಪೂರಕವಾಗಿ ಪೂರ್ವಭಾವಿ ಬೈಠಕ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ತಿಳಿಸಿದ್ದಾರೆ.

ಅದಾಲತ್‌ನಲ್ಲಿ ಆಸ್ತಿ ವಿವಾದ ಒಳಗೊಂಡಂತೆ ಸಿವಿಲ್ ವ್ಯಾಜ್ಯ, ಹಣ ವಸೂಲಾತಿ ದಾವೆ, ನಿರ್ದಿಷ್ಟ ಪರಿಹಾರ ಕಾಯ್ದೆ ಅಡಿ ದಾಖಲಿಸಿರುವ ದಾವೆ, ಮೋಟಾರ್ ವಾಹನಗಳ ಪ್ರಕರಣ, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್‌ಸ್ಥಾಪನೆ ಪ್ರಕರಣ, ರಾಜಿ ಆಗಬಹುದಾದಂತಹ ಕ್ರಿಮಿನಲ್ ಮತ್ತು ಚೆಕ್ ಬೌನ್ಸ್ ಪ್ರಕರಣವನ್ನು ರಾಜಿಗೆ ತೆಗೆದುಕೊಂಡು ಆಯಾಯ ನ್ಯಾಯಲಯಗಳಲ್ಲಿ ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಬಾಕಿ ಇರುವಂತಹ ಪ್ರಕರಣದ ಜತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ ವ್ಯಾಜ್ಯ ಪೂರ್ವ ಪ್ರಕರಣಗಳು(ಬ್ಯಾಂಕ್ ವಸೂಲಾತಿ, ವಿದ್ಯುತ್ ಹಾಗೂ ನೀರಿನ ಶುಲ್ಕ, ಕಾರ್ಮಿಕ ವಿವಾದ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಾರರಿಗೆ ನೋಟಿಸ್ ನೀಡಿ ಕರೆಸಿ ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಬೈಠಕ್ ನಡೆಸಿ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇಂತಹ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಕೀಲರ ಮುಖಾಂತರ ಅಥವಾ ತಾವೇ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದಾಗಿರುತ್ತದೆ. ಜನಸಾಮಾನ್ಯರು ಹಾಗೂ ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಂಡು ಲೋಕ ಅದಾಲತ್‌ಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net