ರಾಷ್ಟ್ರೀಯ ಲೋಕ ಅದಾಲತ್ ಜು. 12ರಂದು

19BYD-4
Published on

ಬ್ಯಾಡಗಿ: ಸಾರ್ವಜನಿಕರಿಗೆ ಸಕಾಲದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ತಾಲೂಕು ಕಾನೂನುಗಳ ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಜು. 12ರಂದು ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರೇಕುಡೆ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಈ ಹಿಂದೆ ಸಣ್ಣಪುಟ್ಟ ಸಮಸ್ಯೆಗಳಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಹತ್ತಾರು ವರ್ಷಗಳ ಕಾಲ ಓಡಾಡುವಂತಾಗಿತ್ತು. ಆದರೆ, ಈಗ ಲೋಕ ಅದಾಲತ್ ಮೂಲಕ ಇಬ್ಬರು ಕಕ್ಷಿದಾರರು ಸಂಧಾನ ಅಥವಾ ರಾಜಿ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ನ್ಯಾಯ ಪಡೆಯಬಹುದಾಗಿದೆ. ಇದರಿಂದ ಸಮಯ, ಹಣ ಹಾಗೂ ಮಾನಸಿಕ ತೊಂದರೆ ತಪ್ಪಿಸಲು ಸಾಧ್ಯವಾಗಲಿದೆ ಎಂದರು.

ಪ್ರಕರಣ ದಾಖಲಿಸಿದ ಅಥವಾ ಸಮಸ್ಯೆಯಿರುವ ಸಾರ್ವಜನಿಕರಿಗೆ ಸಕಾಲದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಂದರೆ, ವರ್ಷದಲ್ಲಿ ನಾಲ್ಕು ಬಾರಿ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಪಘಾತ ಪ್ರಕರಣ, ಮನೆ, ಇತರ ವ್ಯಾಜ್ಯಗಳು, ವೈವಾಹಿಕ ಹಾಗೂ ಕೌಟುಂಬಿಕ ವ್ಯಾಜ್ಯ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್​ಗಳಲ್ಲಿ ಕಟಬಾಕಿದಾರರ (ಎನ್​ಪಿ) ಹಣ ವಸೂಲಾತಿ, ಭೂಸ್ವಾಧೀನ ಪ್ರಕರಣ ಸಂಬಂಧಿಸಿದಂತೆ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ಅವಕಾಶಗಳಿವೆ. ನ್ಯಾಯಾಲಯಕ್ಕೆ ಪಾವತಿಸಿದ ವಾಪಸ್ ಪಡೆಯಬಹುದಾಗಿದೆ. ಲೋಕ ಅದಾಲತ್​ನಲ್ಲಿ ರಾಜಿ ಮಾಡಿಕೊಂಡ ಪ್ರಕರಣಗಳಿಗೆ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ತಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನ್ಯಾಯವಾದಿಗಳ ಸಂಘ, ತಾಲೂಕು ಉಚಿತ ಕಾನೂನು ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದು ಎಂದರು. ಕಿರಿಯಶ್ರೇಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ರೈತರು ಸೇರಿದಂತೆ ಗ್ರಾಹಕರು ಕಟಬಾಕಿ ಸಾಲ ಜಮೆ ಮಾಡಲಾಗದೇ ದುಸ್ಥಿತಿಯಲ್ಲಿ ಸಿಲುಕಿ ತೀವ್ರ ತೊಂದರೆ ಅನುಭವಿಸುತ್ತಿದ್ದು, ಇಂತಹ ಗ್ರಾಹಕರು ಬ್ಯಾಂಕ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಾವು ಪಡೆದ ಸಾಲದ ಮೂಲ ಮೊತ್ತದಲ್ಲೇ ರಿಯಾಯಿತಿ ಪಡೆದು, ನಿಗದಿಪಡಿಸಿದ ಹಣ ಪಾವತಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ, ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ್ಯದರ್ಶಿ ಎಚ್.ಜಿ. ಮುಳಗುಂದ, ಸಹ ಕಾರ್ಯದರ್ಶಿ ಮಂಜುನಾಥ ಕುಮ್ಮೂರ, ಮಾಜಿ ಅಧ್ಯಕ್ಷ ಶಂಕರ ರ್ಬಾ, ನಿಂಗಪ್ಪ ಬಟ್ಟಲಕಟ್ಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net