ಜು.12ರಂದು ರಾಷ್ಟ್ರೀಯ ಲೋಕ ಅದಾಲತ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಮಾಹಿತಿ

National Lok Adalat Mandya
Published on

ಮಂಡ್ಯ: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ತಾಲೂಕಿನ ನ್ಯಾಯಾಲಯದಲ್ಲಿ ಜಿಲ್ಲೆಯಲ್ಲಿ ಜು.12ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಹೇಳಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕ ಅದಾಲತ್‌ನಲ್ಲಿ ಹೆಚ್ಚಿನ ಕಾನೂನು ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಿದ್ದು, ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಿ. ಈ ವರ್ಷದಲ್ಲಿ ನಡೆಯುತ್ತಿರುವ 2 ಲೋಕ ಅದಾಲತ್ ಇದಾಗಿದ್ದು, ಬಾಕಿ ಇರುವ ಸಿವಿಲ್ ಪ್ರಕರಣ, ವಿಭಾಗದ ಧಾವೆ, ಹಣಕಾಸು ವಸೂಲಾತಿ ಧಾವೆ, ಮೋಟಾರು ವಾಹನ ಪ್ರಕರಣ, ಎಂಎಂಆರ್‌ಡಿ ಪ್ರಕರಣ, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣ, ಕ್ರಿಮಿನಲ್ ಪ್ರಕರಣ, ಚೆಕ್‌ಬೌನ್ಸ್ ಪ್ರಕರಣ ಹಾಗೂ ರಾಜಿ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳನ್ನು ತೆಗೆದುಕೊಂಡು ಇತ್ಯರ್ಥ ಮಾಡಲಾಗುವುದು ಎಂದರು.

ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ತಾಲೂಕಿನ ಎಲ್ಲ ನ್ಯಾಯಾಲಯಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕ, ಕಾರ್ಮಿಕ ವಿವಾದ ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲೋಕ ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣಗಳನ್ನು ಕಾನೂನು ಬದ್ಧವಾಗಿ ಇತ್ಯರ್ಥಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

90 ದಿನಗಳ ಮಧ್ಯಸ್ಥಿಕೆ ಅಭಿಯಾನ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಈ ಬಾರಿ 90 ದಿನಗಳ ಮಧ್ಯಸ್ಥಿಕೆ ಆಂದೋಲನವನ್ನು ಜು.1ರಿಂದ ಅ.7ರವರೆಗೆ ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆ ವಹಿಸುವ ಮೂಲಕ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ. ನೇಷನ್ 90 ಡೆಸ್ ಎಂಬ ಘೋಷವಾಕ್ಯದಡಿ 7 ತಾಲೂಕಿನಲ್ಲೂ ಮಧ್ಯಸ್ಥಿಕೆ ವಹಿಸಿ ಕಾನೂನು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಮಧ್ಯಸ್ಥಿಕೆ ಡ್ರೈವ್‌ನಲ್ಲಿ ನುರಿತ ವಕೀಲರು ಹಾಗೂ ಕಕ್ಷಿದಾರರು ಇರುತ್ತಾರೆ. ಇಬ್ಬರಿಗೂ ಸಹ ಸಮಾಧಾನ ತರುವ ರೀತಿ ಹಾಗೂ ನ್ಯಾಯ ಸಮ್ಮತವಾಗಿ ಪ್ರಕರಣಗಳು ವಿಲೇವಾರಿ ಮಾಡಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net