

ಉಡುಪಿ: ಗ್ರಂಥಾಲಯ ಜ್ಞಾನದ ಭಂಡಾರ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ನಗರದ ಅಜ್ಜರಕಾಡು ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಗರ ಕೇಂದ್ರ ಗ್ರಂಥಾಲಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭ -ಉದ್ಘಾಟಿಸಿ, ಮಾತನಾಡಿದರು.
ದೇಶ ಸುತ್ತು ಕೋಶ ಓದು ಎಂಬ ಶಿವರಾಮ ಕಾರಂತರ ಮಾತಿನಂತೆ, ಕೋಶ ಎಂದರೆ ಗ್ರಂಥಾಲಯ. ಇಲ್ಲಿ ಓದಿದಾಗ ಜ್ಞಾನ ವಿಸ್ತಾರವಾಗುತ್ತದೆ. ಹಾಗೆಯೇ ದೇಶ ಸುತ್ತುವುದರಿಂದ ಪ್ರತಿಯೊಬ್ಬರ ಜನಜೀವನ ಶೈಲಿಯನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಅತ್ಯುತ್ತಮ ಶೈಲಿಯಲ್ಲಿ, ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ ಗ್ರಂಥಾಲಯದ ಕಟ್ಟಡವನ್ನು ನಿರ್ಮಿಸಿದ್ದು, ಇಲ್ಲಿ ಸಾಕಷ್ಟು ಅತ್ಯುತ್ತಮ ಪುಸ್ತಕಗಳ ಸಂಗ್ರಹಣೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಹಾಗೂ ಓದುಗರಿಗೆ ಸಹ ಉತ್ತಮ ಪರಿಸರ ವ್ಯವಸ್ಥೆ ಇದೆ. ಎಲ್ಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಇದರಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸೃಜನಶೀಲ ಬರಹಗಾರ ಜೆ.ಪಿ. ರಾವ್ ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಸಿಬ್ಬಂದಿ ಜಗದೀಶ್ ಭಟ್ ಕೆ., ಗ್ರಂಥಾಲಯದ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ಆಯ್ಕೆಯಾದ ಸುಲೇಖಾ ದಯಾನಂದ್, ಅಹಲ್ಯಾ ಅಮೀನ್ ಹಾಗೂ ಪ್ರಭಾ, ಅತೀ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿದ ಆಶಾ ಹಾಗೂ ಅನುಸೂಯ, ಉತ್ತಮ ಓದುಗ ಪ್ರಶಸ್ತಿಗೆ ಆಯ್ಕೆಯಾದ ದೇವಿ ಮತ್ತು ಲಕ್ಷಿ$್ಮಶ ಉಪಾಧ್ಯಾಯ ಇವರನ್ನು ಸನ್ಮಾನಿಸಲಾಯಿತು.
ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರಕಲೆ, ಕನ್ನಡ ಪುಸ್ತಕ ಓದಿ ವಿಷಯ ತಿಳಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸಾರ್ವಜನಿಕ ಮಕ್ಕಳಿಗೆ ಪಾಸ್ಸಿಂಗ್ ದಿ ಬಾಲ್, ಸಂಗೀತ ಕುರ್ಚಿ ಹಾಗೂ ಚಿತ್ರಕಲಾ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜೆ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ರಂಜಿತ ಸಿ ನಿರೂಪಿಸಿ, ಸುನೀತ ಬಿ.ಎಸ್ ವಂದಿಸಿದರು.