

ಮಂಡ್ಯ: ದೆಹಲಿಯಲ್ಲಿ ಜೂ.6ರಿಂದ 12ರವರೆಗೆ ನಡೆಯಲಿರುವ 66ನೇ ನ್ಯಾಷನಲ್ ಸ್ಕೂಲ್ ಗೇಮ್‌ಗೆ ಕರ್ನಾಟಕ ತಂಡದಿಂದ ಆಯ್ಕೆಯಾಗಿರುವ ಮಂಡ್ಯದ ಆಟಗಾರರನ್ನು ನಗರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಚೇರಿ ಆವರಣದಲ್ಲಿ ಉಪನಿರ್ದೇಶಕ ಎಸ್.ಉಮೇಶ್ ಅವರು ಸನ್ಮಾನಿಸಿ ಬೀಳ್ಕೊಟ್ಟರು.
ಖೋ ಖೋ ಪಂದ್ಯಾವಳಿಗೆ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ವಿಶ್ವೇಶ್ವರಯ್ಯ ಪ.ಪೂ ಕಾಲೇಜಿನ ಕೆ.ಅಕ್ಷತಾ, ಕೆ.ಆರ್.ಚಂದನ, ಕೆ.ಪಿ. ವರಲಕ್ಷ್ಮೀ, ಜಿ.ಎಸ್.ಮಾನ್ಯಗೌಡ, ಕೆ.ಎಸ್.ಹಿಯಾನಿ, ಎಸ್.ಪ್ರಿಯ, ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸ.ಪ.ಪೂ ಕಾಲೇಜಿನ ಎಚ್.ಎಸ್.ಸಹನಾ, ಕಬಡ್ಡಿಗೆ ಮದ್ದೂರು ತಾಲೂಕು ಕೊಪ್ಪದ ಸರ್ವೋದಯ ಪ.ಪೂ ಕಾಲೇಜಿನ ಕೆ.ನಾಗೇಶ್ ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಉಮೇಶ್, ಮಂಡ್ಯದಿಂದ ಖೋ ಖೋ ಪಂದ್ಯಾವಳಿಗೆ 6 ಜನ, ಬ್ಯಾಸ್ಕೆಟ್‌ಬಾಲ್‌ಗೆ ಒಬ್ಬರು ಹಾಗೂ ಕಬಡ್ಡಿಗೆ ಒಬ್ಬರು ಆಯ್ಕೆಯಾಗಿದ್ದಾರೆ. ಶುಕ್ರವಾರ ಬೆಂಗಳೂರಿನಿಂದ ತೆರಳಿ 5ರಂದು ದೆಹಲಿ ತಲುಪಲಿದ್ದಾರೆ. ಮಂಡ್ಯದಿಂದಲೇ ಒಟ್ಟು 8 ಜನರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವುದು ಬಹಳ ಖುಷಿಯ ವಿಷಯ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರಬೇಕು. ಆಗಲೇ ತಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಪ್ರಾಂಶುಪಾಲ ಕೆ.ರಾಮಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಚೇರಿ ಅಧೀಕ್ಷಕ ರಾಜೇಗೌಡ, ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎಸ್.ಉಮೇಶ್, ಜಿ.ಕೆ.ನವೀನ್ ಹಾಜರಿದ್ದರು.