ಕುವೆಂಪು ಸಾಹಿತ್ಯವನ್ನು ಮನನ ಮಾಡಿಕೊಳ್ಳಿ: ಮೈಸೂರು ವಿವಿ ಕುಲಸಚಿವೆ ವಿ.ಆರ್.ಶೈಲಜಾ ಹೇಳಿಕೆ

National level Kammata mandya
Published on

ಮಂಡ್ಯ: ಮಲೆನಾಡು ಪ್ರಾಂತ್ಯದಿಂದ ಬಂದಂತಹ ಕುವೆಂಪು ಅವರು ಇಡೀ ವಿಶ್ವಕ್ಕೆ ಆಧುನಿಕ ಬದುಕಿಗೆ ಬೇಕಾದಂತಹ ಕಾಯಕ ಯೋಜನೆಯ ಮಹತ್ವವನ್ನು ಸಾರಿದರು. ಕನ್ನಡದ ಸಾಂಸ್ಕೃತಿಕ ಪ್ರಜ್ಞೆಯನ್ನು ಅನಂತ ವಿಶ್ವದೆಡೆಗೆ ಕೊಂಡೊಯ್ದ ಅವರ ಸಾಹಿತ್ಯವನ್ನು ಎಲ್ಲರೂ ಮನನ ಮಾಡಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ವಿ.ಆರ್.ಶೈಲಜಾ ಹೇಳಿದರು.

ನಗರದ ಕರ್ನಾಟಕ ಸಂಘದ ವತಿಯಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಕುವೆಂಪು ಸಾಹಿತ್ಯ ಯುವ ನೋಟ ರಾಷ್ಟ್ರಮಟ್ಟದ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಪರಿಕಲ್ಪನೆಯಲ್ಲಿ ಬದಲಾವಣೆ ತರಲು ಕೇವಲ ಭಕ್ತಿ ಮಾರ್ಗವೊಂದೇ ಅಲ್ಲ ಕಾಯಕ ಮಾರ್ಗವನ್ನು ಆಯ್ಕೆ ಮಾಡಬಹುದು. ವಿಶ್ವಪಥ, ಪೂರ್ಣದೃಷ್ಟಿ, ನಾವೆಲ್ಲ ಒಂದೇ ಪಥದಲ್ಲಿರುವ ಜೀವಿಗಳು ಎಂಬ ಭಾವನೆಯನ್ನು ಇಟ್ಟುಕೊಂಡು ಸಾಗಬೇಕು ಎಂಬುದನ್ನು ಕುವೆಂಪು ಪ್ರತಿಪಾದಿಸಿದ್ದರು ಎಂದರು.

ಸಾಹಿತ್ಯ ವಿದ್ಯಾರ್ಥಿಗಳು, ಸಾಹಿತಿಗಳು, ಅಧ್ಯಾಪಕರಷ್ಟೇ ಅವರ ಸಾಹಿತ್ಯವನ್ನು ಓದುವುದು, ಅಧ್ಯಯನ ಮಾಡುವುದರ ಜತೆಗೆ ಸಾಮಾನ್ಯರೂ ಸಹ ಅವರ ಸಾಹಿತ್ಯವನ್ನು ಓದುವಂತಹ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಲ್ಲಿ ಮನುಜಮತ ವಿಶ್ವಪಥ ಎಂದು ಜಗತ್ತಿಗೆ ಸಾರಿದ ಅವರ ಆಶಯಗಳು ವ್ಯಕ್ತವಾಗುತ್ತವೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲೂ ಅದಕ್ಕೆ ತಕ್ಕುದಾದ ಕೆಲಸವನ್ನು ಸಾಧಿಸಿ ತೋರಿಸಿದರು. ಮೈಸೂರು ಅರಸರು ವಿವಿಗೆ ನೀಡಿದ್ದ ಜಾಗದ ಜತೆಗೆ ಕುಕ್ಕರಹಳ್ಳಿ ಕೆರೆಯನ್ನೂ ಸಹ ವಿವಿಯ ಆಸ್ತಿಗೆ ಸೇರಿಸಿಕೊಂಡು 830 ಎಕರೆಯ ವಿಶಾಲ ಭೂಮಿಯನ್ನು ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುವಂತೆ ಮಾಡಿದವರು ಕುವೆಂಪು ಎಂದು ಬಣ್ಣಿಸಿದರು.

ಸಂಶೋಧನೆ, ಬೋಧನೆ, ಪ್ರಕಟಣೆ ಈ ಮೂರು ಅಂಶಗಳಿಗೂ ಒತ್ತು ಕೊಟ್ಟು ತಾವೂ ಅದನ್ನು ಪರಿಪಾಲನೆ ಮಾಡುತ್ತಾ, ಪ್ರೋತ್ಸಾಹ ನೀಡಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದರು. ಅವರಿದ್ದ ಕಾಲಘಟ್ಟದಲ್ಲಿ ಮಾಡಿದ ಕಾರ್ಯಗಳು ಎಲ್ಲರಿಗೂ ಗೊತ್ತಾಗಬೇಕು. ಇಂತಹ ಕಮ್ಮಟಗಳಿಂದ ಅದು ತಿಳಿಯಲು ಸಾಧ್ಯ. ಕುವೆಂಪು ಅವರು ಇದ್ದಷ್ಟು ದಿನವು ತಮ್ಮ ಮಾತು, ಕೃತಿಗೂ ಬದಲಾವಣೆ ಇಲ್ಲದಂತೆ ನಡೆದುಕೊಂಡರು. ಅವರ ಸಾಹಿತ್ಯ, ವಿಚಾರಧಾರೆಗಳು ಹೆಚ್ಚೆಚ್ಚು ಜನರಿಗೆ ತಿಳಿಯುವಂತಾಗಬೇಕು. ವಿದ್ಯಾರ್ಥಿಗಳು ಹೆಚ್ಚು ಪ್ರಚಾರ ಮಾಡಬೇಕು. ಇಂತಹ ಸಂಘಟನೆಗಳಿಂದ ಹೆಚ್ಚು ಕಾರ‌್ಯಕ್ರಮಗಳು ಆಗಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ ಮಾತನಾಡಿ, ವಿಶ್ವಮಾನವನಿಗೆ ಯಾವ ಜಾತಿ, ಮತ, ಪಂಥವೂ ಇಲ್ಲ. ಇಂತಹ ದಾರಿಯಲ್ಲೇ ಕುವೆಂಪುರವರು ಸಾಗಿ ವಿಶ್ವಮಾನವರಾದರು. ಈಗ ಜಾತಿಗೊಬ್ಬ ಜಗದ್ಗುರುಗಳಾಗಿದ್ದಾರೆ. ಬೇರೆ ಜಾತಿಯವರು ಜಗದ್ಗುರುಗಳನ್ನು ಇಟ್ಟುಕೊಂಡು ಏನೆಲ್ಲ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಎಂ.ಕೆಂಪಮ್ಮ, ಡಾ. ಎನ್.ಎಸ್.ದೇವಿಕಾ, ಡಾ.ಎಂ.ಎಸ್.ಅನಿತಾ, ನಗರಸಭಾ ಸದಸ್ಯೆ ಮಂಜುಳಾ ಉದಯಶಂಕರ್, ಎಂ.ಯು.ಶ್ವೇತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net