

ಮಂಡ್ಯ: ನಾಗಮಂಗಲ ತಾಲೂಕು ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಜ.23 ರಿಂದ 27ರವರೆಗೆ 67ನೇ ರಾಷ್ಟ್ರಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ(19 ವರ್ಷದೊಳಗಿನವರು) ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಐದು ದಿನ ನಡೆಯಲಿರುವ ಟೂರ್ನಿಗೆಂದು ಹೊರ ರಾಜ್ಯದಿಂದ ಬರುವ ಆಟಗಾರರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಬಾಲಕರ ವಿಭಾಗದಲ್ಲಿ 35 ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ 30 ರಿಂದ 35 ತಂಡ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ತಂಡಕ್ಕೆ ಒಬ್ಬ ಜನರಲ್ ಮ್ಯಾನೇಜರ್ ಹಾಗೂ ಕೋಚ್ ಇರಲಿದ್ದಾರೆ. ಅವರು ಕ್ರೀಡಾಪಟುಗಳ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರಬೇಕು. ರಾತ್ರಿ ಸಮಯದಲ್ಲಿ ಅವರಿಗೆ ಉತ್ತಮ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಆಟಗಾರರಿಗೆ ಬಸ್ ವ್ಯವಸ್ಥೆ, ಆಹಾರ, ವಸತಿ, ಆಂಬುಲೆನ್ಸ್, ಮೆಡಿಕಲ್(ನಾಲ್ವರು ವೈದ್ಯರು ಹಾಗೂ ನರ್ಸ್ ಒಳಗೊಂಡಂತೆ) ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಯಾವುದೇ ಅಹಿತಕರ ಅನುಭವ ಆಗದಂತೆ ಎಚ್ಚರ ವಹಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಡಿಡಿಪಿಯು ಚೆಲುವಯ್ಯ, ನಾಗಮಂಗಲ ವಿಭಾಗದ ಡಿವೈಎಸ್ಪಿ ಎಚ್.ಲಕ್ಷ್ಮೀ ನಾರಾಯಣ ಪ್ರಸಾದ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಅಧಿಕಾರಿ ಪರಮಶಿವಯ್ಯ, ನೋಡಲ್ ಅಧಿಕಾರಿ ಶಿವಪ್ಪ, ಪದವಿ ಪೂರ್ವ ಶಾಲಾ ಶಿಕ್ಷಣ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಶ್, ಉಪನ್ಯಾಸಕ ಸಂಘದ ಅಧ್ಯಕ್ಷ ಚನ್ನಕೃಷ್ಣ, ಜಿಲ್ಲಾ ಕ್ರೀಡಾ ಸಂಯೋಜಕ ಎಸ್.ಎಂ.ಗುರುಸ್ವಾಮಿ ಇತರರಿದ್ದರು.