

ಬೀಳಗಿ: ತಾಲೂಕಿನ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಬ್ಯಾಂಕ್‌ನ ರಜತ ಮಹೋತ್ಸವದ ಅಂಗವಾಗಿ ಮೇ 6 ರಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಮೇ 21ರಿಂದ ಅಖಿಲ ಭಾರತ ಎ ಗ್ರೇಡ್ ಪುರುಷರ ಮತ್ತು ಮಹಿಳೆಯರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ ತಿಳಿಸಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಪಂದ್ಯಾವಳಿಯ ಸಿದ್ಧತೆ, ಕಬಡ್ಡಿ ಮೈದಾನ ಮತ್ತು ವೀಕ್ಷಕರಿಗಾಗಿ ಸಿದ್ಧಗೊಳಿಸಿದ ಆಸನದ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು.
ಪಂದ್ಯಾವಳಿಯಲ್ಲಿ ಒಟ್ಟು 18 ಪುರುಷ ಹಾಗೂ 16 ಮಹಿಳಾ ತಂಡಗಳು ಭಾಗವಹಿಸಲಿದ್ದು, ಮೇ 21ರಿಂದ 23 ರ ವರೆಗೆ ಕೊರ್ತಿಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಜರುಗಲಿದೆ. ವಿಜೇತ ಪುರುಷ ಹಾಗೂ ಮಹಿಳಾ ತಂಡಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನ 2,00,000 ರೂ., ದ್ವಿತೀಯ ಬಹುಮಾನ 1,50,000 ರೂ., ಮೂರು ಮತ್ತು ನಾಲ್ಕನೇ ಬಹುಮಾನವಾಗಿ 1,00,000 ರೂ. ನೀಡಲಾಗುತ್ತದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ನಿರ್ದೇಶಕ ಹೇಮಾದ್ರಿ ಕೊಪ್ಪಳ, ಎ.ಎಚ್.ಬೀಳಗಿ ಇದ್ದರು.