

ಮಂಗಳೂರು: ಚೆಸ್ ರಾಜರ ಕಾಲದಿಂದಲೂ ಪ್ರತಿಷ್ಠೆಯ ಆಟವಾಗಿ ಮುನ್ನಡೆದುಕೊಂಡು ಬಂದಿದೆ. ಚೆಸ್ ಸಾಧಕರಿಗೆ ಪಾಲಿಕೆ ಕ್ರೀಡಾನಿಧಿಯಿಂದ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ ವತಿಯಿಂದ ಐದು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಓಪನ್ ರೇಟೆಡ್ ಚೆಸ್ ಪಂದ್ಯಾಟವನ್ನು ಮಂಗಳವಾರ ನಗರದ ಪುರಭವನ ಮಿನಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ಕೈದು ಸಾವಿರ ವರ್ಷಗಳ ಹಿಂದೆಯೇ ಚೆಸ್ ಆಟ ದೇಶದಲ್ಲಿ ಪ್ರಸಿದ್ಧಿಯಲ್ಲಿತ್ತು. ರಾಜಮಹಾರಾಜರು ಚೆಸ್‌ಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯ ವೈಭವದ ಆಟ ಎನ್ನುವ ಹೆಗ್ಗಳಿಕೆಯೂ ಚೆಸ್‌ಗೆ ಇದೆ ಎಂದರು.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು ಮಾತನಾಡಿ, ಚೆಸ್ ಬುದ್ಧಿಮತ್ತೆಯ ಆಟವಾಗಿದ್ದು, ವಿಶ್ವನಾಥನ್ ಆನಂದ್, ಕೊನೇರು ಹಂಪಿ, ಇತ್ತೀಚಿನ ಪ್ರಗ್ಯಾನಂದ ಇವರೆನಲ್ಲ ನಮ್ಮ ದಕ್ಷಿಣ ಭಾರತದವರು. ಕರ್ನಾಟಕದ ತಮಿಳುನಾಡು, ಆಂಧ್ರ ಪ್ರದೇಶದ, ಕೇರಳದವರು ಚೆಸ್‌ನಲ್ಲಿ ಉತ್ತಮ ಸಾಧನೆ ತೋರಿಸುತ್ತಿದ್ದಾರೆ. ಕರಾವಳಿಯ ಜನರ ಐಕ್ಯೂ ಮಟ್ಟ ಹೆಚ್ಚಿದ್ದು, ಚೆಸ್ ಆಟದ ಬೆಳವಣಿಗೆ ಇಲ್ಲಿ ದೊಡ್ಟ ಮಟ್ಟದಲ್ಲಿ ಆಗಬೇಕಿದೆ ಎಂದರು.
ಕರ್ಣಾಟಕ ಬ್ಯಾಂಕ್ ಡಿಜಿಎಂ ಹೇರಳೆ ವಸಂತ ರಾವ್, ಎಂಆರ್‌ಪಿಎಲ್ ಜಿಜಿಎಂ ಕೃಷ್ಣ ಹೆಗ್ಡೆ ಮೀಯಾರು ಮುಖ್ಯ ಅತಿಥಿಗಳಾಗಿದ್ದರು.
ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಶರಣ್‌ರಾವ್ ಅವರನ್ನು ಸನ್ಮಾನಿಸಲಾಯತು. ಗೌರವಾಧ್ಯಕ್ಷ ಸುನೀಲ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಸಲಹಾ ಸಮಿತಿ ಸದಸ್ಯರಾದ ಡಾ.ಅಮರಶ್ರೀ ಅಮರನಾಥ ಶೆಟ್ಟಿ, ನಾರಾಯಣ ಎಲ್., ಕೋಶಾಧಿಕಾರಿ ಪೂರ್ಣಿಮಾ ಎಸ್.ಆಳ್ವ ಉಪಸ್ಥಿತರಿದ್ದರು.
ಎಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಸ್ವಾಗತಿಸಿ, ಉಪಾಧ್ಯಕ್ಷೆ ವಾಣಿ ಎಸ್. ಪಣಿಕ್ಕರ್ ಅವರು ವಂದಿಸಿದರು. ಸುಮಾ ಕೋಟೆ ಕಾರ್ಯಕ್ರಮ ನಿರೂಪಿಸಿದರು.
ಅ.21ರಂದು ಸಮಾರೋಪ ಸಮಾರಂಭ ನಡೆಯಲಿದೆ. ವಿಜೇತರಿಗೆ ಒಟ್ಟು ಆರು ಲಕ್ಷ ರೂ. ನಗದು, ವಿವಿಧ ವಿಭಾಗಗಳಲ್ಲಿ ಟ್ರೋಫಿ ಜತೆಗೆ ಸುಮಾರು 200 ಬಹುಮಾನಗಳನ್ನು ಹೊಂದಿದೆ. ಮಂಗಳೂರು ಸೇರಿದಂತೆ ದೇಶದ ವಿವಿಧೆಡೆಯ 500ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.