

ಪುತ್ತೂರು ಗ್ರಾಮಾಂತರ: ಶೈಕ್ಷಣಿಕ ವರ್ಷದಲ್ಲಿ ನಡೆದ 67ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 14ರ ವಯೋಮಾನದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ಜಿ.ಎಂ.ಕೀರ್ತಿ ಅವರ ಸಾಧನೆ ಗುರುತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ 1 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ.
ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ನಿವಾಸಿ ಮೋನಪ್ಪ ಗೌಡ ಅವರ ಪುತ್ರಿಯಾದ ಕೀರ್ತಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪಡೆದ ಚಿನ್ನದ ಪದಕ ಕರ್ನಾಟಕ ರಾಜ್ಯಕ್ಕೆ ಲಭಿಸಿದ ಏಕೈಕ ಚಿನ್ನದ ಪದಕವಾಗಿದೆ.
ಮೋನಪ್ಪ ಗೌಡ ಕೃಷಿ ಕೂಲಿ ಕಾರ್ಮಿಕರಾಗಿದ್ದು, ಆರ್ಥಿಕವಾಗಿ ತೀರಾ ಬಡ ಕುಟುಂಬದ ವಿದ್ಯಾರ್ಥಿನಿಯ ಸಾಧನೆ ಗುರುತಿಸಿ, ಮುಂದೆ ಆಕೆ ಅಂತಾರಾಷ್ಟ್ರೀಯಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಅಭ್ಯಾಸ ನಡೆಸಲು ಅನುಕೂಲವಾಗುವಂತೆ ಸಿದ್ದರಾಮಯ್ಯ ಆರ್ಥಿಕ ನೆರವಿನ ಹಸ್ತ ಚಾಚಿದ್ದಾರೆ.
ಶಾಸಕ ಅಶೋಕ್‌ಕುಮಾರ್ ರೈ ಅವರು ವಿದ್ಯಾರ್ಥಿನಿ ಮನೆಗೆ ತೆರಳಿ ಅಭಿನಂದಿಸಿದ್ದರು.ಈ ವೇಳೆ ಆಕೆಯ ಸಂಕಷ್ಟವನ್ನರಿತ ಶಾಸಕರು ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಶಾಸಕರ ಪತ್ರ ಪರಿಗಣಿಸಿದ ಸರ್ಕಾರ ಇದೀಗ ಆರ್ಥಿಕ ನೆರವು ಘೋಷಿಸಿದೆ.