

ಮಂಡ್ಯ: ಶಾಲಾ ಶಿಕ್ಷಣ ಇಲಾಖೆ, ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ ಹಾಗೂ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಜ.24ರಿಂದ 27ರವರೆಗೆ 67ನೇ ರಾಷ್ಟ್ರಮಟ್ಟದ 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 4 ದಿನ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ 29 ರಾಜ್ಯದ ತಂಡಗಳು ಭಾಗವಹಿಸಲಿದ್ದಾರೆ. 29 ಬಾಲಕ ಹಾಗೂ 28 ಬಾಲಕಿಯರ ತಂಡಗಳು ಭಾಗವಹಿಸಲಿವೆ. ಅಂದರೆ 346 ಬಾಲಕರು, 336 ಬಾಲಕಿಯರು ಸೇರಿದಂತೆ ಒಟ್ಟು 682 ಆಟಗಾರರು ಭಾಗವಹಿಸಲಿದ್ದಾರೆ. ಅವರಿಗೆ ಬಸ್‌ವ್ಯವಸ್ಥೆ, ಆಹಾರ, ವಸತಿ, ಮೂರು ಆಂಬುಲೆನ್ಸ್, ಮೆಡಿಕಲ್(ನುರಿತ ವೈದ್ಯರು ಹಾಗೂ ನರ್ಸ್ ಒಳಗೊಂಡಂತೆ) ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಅನುಭವ ಆಗದಂತೆ ಎಚ್ಚರ ವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
24ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಸುಖೇಶ್ ಹೆಗ್ಗಡೆ ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದಾರೆ. 27ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸಭೆಯಲ್ಲಿ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಗುಬ್ಬಿಗೂಡು ರಮೇಶ್, ಡಿಡಿಪಿಯು ಚೆಲುವಯ್ಯ, ರಾಜ್ಯ ಕ್ರೀಡಾ ಸಂಯೋಜಕ ಎಂ.ಆರ್.ಗೋಪಾಲಕೃಷ್ಣ, ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಹನುಮಂತಯ್ಯ, ಅಧ್ಯಕ್ಷ ಚೆನ್ನಕೃಷ್ಣಯ್ಯ, ಕ್ರೀಡಾ ಸಂಯೋಜಕ ಗುರುಸ್ವಾಮಿ ಇತರರಿದ್ದರು.