ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ ಕಾರ್ಯಾಚರಣೆ

Crime
Published on

ಮಂಗಳೂರು: ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತಂಡ ಮಂಗಳವಾರ ದ.ಕ. ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ತಂಡ ಬಲೆ ಬೀಸಿದೆ.

ಆರೋಪಿಗಳ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ ತಂಡ ಮನೆಗೆ ‘ವಾಂಟೆಡ್ ನೋಟಿಸ್’ ಅಂಟಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಮೊಹಮ್ಮದ್ ಯಾನೆ ಮುಸ್ತಫಾ ಪೈಚಾರ್, ಬೆಳ್ಳಾರೆಯ ಅಬೂಬಕ್ಕರ್ ಸಿದ್ಧಿಕ್, ಸುಳ್ಯ ಕಲ್ಲುಮುಟ್ಲು ನಿವಾಸಿ ಉಮರ್ ಫಾರೂಕ್, ನೌಷಾದ್ ಹಾಗೂ ಮಸೂದ್ ಅಗ್ನಾಡಿ ಪತ್ತೆಗೆ ಎನ್‌ಐಎ ತಂಡ ತೀವ್ರ ಶೋಧ ಕಾರ್ಯ ಕೈಗೊಂಡಿದೆ. ಅವರ ಭಾವಚಿತ್ರ ಇರುವ ವಾಂಟೆಡ್ ಲಿಸ್ಟ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿಯೂ ಅಂಟಿಸಲಾಗಿದೆ. ಆರೋಪಿಗಳು ಮನೆಯವರೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎನ್ನುವುದನ್ನು ಕೂಡ ಎನ್‌ಐಎ ತಂಡ ಗಮನಿಸುತ್ತಿದೆ. ದ.ಕ.ಜಿಲ್ಲೆಯ ಬೆಳ್ತಂಗಡಿ, ಬೆಳ್ಳಾರೆ, ಸುಳ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಏನಿದು ಪ್ರಕರಣ?:

ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ 2022 ಜು.26ರಂದು ರಾತ್ರಿ ಚಿಕನ್ ಸ್ಟಾಲ್ ಬಳಿಯಲ್ಲೇ ಪ್ರವೀಣ್ ಅವರನ್ನು ದುಷ್ಕರ್ಮಿಗಳು ತಲವಾರ್‌ನಿಂದ ಕಡಿದು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡ ಶಂಕೆ ಮೇರೆಗೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಸರ್ಕಾರ ವಹಿಸಿತ್ತು. ಪ್ರಕರಣದಲ್ಲಿ 21 ಆರೋಪಿಗಳ ಪೈಕಿ 16 ಮಂದಿಯನ್ನು ಎನ್‌ಐಎ ತಂಡ ಈಗಾಗಲೇ ಬಂಧಿಸಿದೆ.

ಕಾರು ಚಾಲಕನ ಮನೆಯಲ್ಲಿ ವಿಚಾರಣೆ:

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ಕಾರು ಚಾಲಕ ನೌಷಾದ್ ಎಂಬಾತನ ಮನೆಗೆ ಭೇಟಿ ನೀಡಿ ತಂಡ ವಿಚಾರಣೆ ನಡೆಸಿದೆ. ತಲೆಮರೆಸಿಕೊಂಡಿರುವ ಆರೋಪಿ ಬಗ್ಗೆ ತಂಡ ಮನೆಯವರನ್ನು ವಿಚಾರಣೆಗೆ ಒಳಪಡಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ತಮಿಳುನಾಡಿನ ಈರೋಡ್‌ನಲ್ಲಿ ಆಶ್ರಯ ವ್ಯವಸ್ಥೆ ಮಾಡಿದ್ದ ಆರೋಪ ನೌಷಾದ್ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net