ಪರಿಶಿಷ್ಟರ ಮೇಲೆ ಹಲ್ಲೆ ನಡೆಸಿದವರ ಬಂಧನಕ್ಕೆ ಆಗ್ರಹ: ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಪ್ರತಿಭಟನೆ

National Human Rights Protection Force protest Mandya
Published on

ಮಂಡ್ಯ: ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸದೆ ಪೊಲೀಸರು ಆರೋಪಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಭಾರತ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ತಮಟೆ ಚಳವಳಿ ನಡೆಸಿದರು.

ಚಾಮನಹಳ್ಳಿಯಿಂದ ಮಂಡ್ಯದವರೆಗೆ ಬೈಕ್ ಜಾಥಾ ನಡೆಸಿ, ನಂತರ ನಗರದ ಜೆ.ಸಿ.ವೃತ್ತದ ಎದುರು ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ತಮಟೆ ಚಳವಳಿ ಮೆರವಣಿಗೆ ನಡೆಸಿ ನಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿದರು.

ಮದ್ದೂರು ಪೊಲೀಸ್ ಠಾಣೆಯಲ್ಲಿ ಎಸ್‌ಸಿ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ. ದೌರ್ಜನ್ಯ ಮಾಡಿರುವ ಅಂಗಡಿ ಮಾಲೀಕರು ಅಕ್ರಮ ಮದ್ಯ ಮಾರಾಟ ಮಾಡುವ ಮೂಲಕ ಗ್ರಾಮದ ಯುವಕರನ್ನು ಕುಡಿತ ಮತ್ತು ತಂಬಾಕು ಚಟಗಳಿಗೆ ದಾಸರನ್ನಾಗಿಸಿ ಸಮಾಜದ ಸ್ವಾಸ್ಥೃ ಹಾಳು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಗಲಾಟೆಯು ಸಂಪೂರ್ಣ ಚಿತ್ರಣ ಅವರ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುತ್ತದೆ. ಅದರಂತೆ ಅವರು ಅದನ್ನು ಗಮನಿಸಿ ಸೆರೆಯಾದ ಸಿಸಿ ಕ್ಯಾಮರಾದ ದೃಶ್ಯವಳಿಗಳನ್ನೇ ಮರೆಮಾಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿಗಳು ಹಾಗೂ ಮಳವಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಅವರಿಗೆ ಆರೋಪಿಗಳನ್ನು ಬಂಧಿಸುವಂತೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ತನಿಖಾಧಿಕಾರಿ ನೇಮಿಸಬೇಕು. ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ರಸ್ತೆಯಲ್ಲಿ ತಿರುಗಾಡುವಾಗ ಅವರನ್ನು ದಿಟ್ಟಿಸಿ ನೋಡುತ್ತಿರುವ ಆರೋಪಿಗಳಿಗೆ ಎಚ್ಚರಿಕೆ ನೀಡಬೇಕು. ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುತ್ತಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸುವ ಮೂಲಕ ನೊಂದವರಿಗೆ ನ್ಯಾಯ ಸಿಗುವಂತೆ ಪೊಲೀಸರು ತಕ್ಷಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಎಸ್‌ಪಿ ಈ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಕುಮಾರ್, ಮುಖಂಡರಾದ ಪ್ರಕಾಶ್ ನಿಡಘಟ್ಟ, ಶಿವರಾಜು ಮರಳಿಗ, ರಾಜೇಶ್, ಕಾರ್ತಿಕ್, ಶೇಷಾದ್ರಿ, ಗೋವಿಂದಾ, ತೇಜು, ಕಿರಣ್, ರಾಚಯ್ಯ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net