ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ

udp-12-kota
Published on

ಉಡುಪಿ: ಆಧುನಿಕ ತಂತ್ರಜ್ಞಾನ ಯಂತ್ರಗಳ ಬಳಕೆ ಹಾಗೂ ಹೆಚ್ಚು ಕಾರ್ಮಿಕರಗಳನ್ನು ನಿಯೋಜಿಸುವ ಮೂಲಕ ಹೆದ್ದಾರಿ ರಸ್ತೆ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಬೇಕೆಂದು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂತೆಕಟ್ಟೆ ಅಂಡರ್​ಪಾಸ್​, ಇಂದ್ರಾಳಿ ಸೇತುವೆ, ಕರಾವಳಿ ಜಂಕ್ಷನ್​ನಿಂದ ಮಲ್ಪೆ ರಸ್ತೆ, ಪರ್ಕಳದಿಂದ ಆಗುಂಬೆವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಗಳು ಮಂದಗತಿಯಲ್ಲಿದ್ದು ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿವೆ ಎಂಬ ದೂರುಗಳು ಪ್ರತಿನಿತ್ಯ ಕೇಳಿಬರುತ್ತಿದೆ. ಕಾಮಗಾರಿ ವೇಗವನ್ನು ಹೆಚ್ಚಿಸಬೇಕು ಎಂದರು.

ಸಂತೆಕಟ್ಟೆ ಬಳಿ ರಸ್ತೆ ಕಾಮಗಾರಿ ದಿನಕ್ಕೆ 10 ಮೀಟರ್​ ಕೂಡ ಆಗುತ್ತಿಲ್ಲ. ಈ ರೀತಿ ಕಾಮಗಾರಿಯನ್ನು ಮಾಡಿದರೆ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲವಾಗುತ್ತದೆ. ಈ ಬಗ್ಗೆ ಇಂಜಿನಿಯರ್​ಗಳು ನಿಗಾವಹಿಸಬೇಕು ಎಂದರು.

ಕರಾವಳಿ ಬೈಪಾಸಿನಿಂದ ಮಲ್ಪೆ ವರೆಗಿನ ರಾಷ್ಟ್ರೀಯ ಹೆದ್ದಾರಿ ನಿಮಾರ್ಣಕ್ಕೆ ಆಗತ್ಯವಿರುವ ಭೂಮಿ ಸ್ವಾಧಿನ ಪ್ರಕ್ರಿಯೆಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಭೂಮಿಯ ಮಾಲೀಕರಿಗೆ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪರಿಹಾರ ಒದಗಿಸಿ ಸಾಮಾಜಿಕ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು. ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಳ್ಳದ ಬಗ್ಗೆ ಸಾರ್ವಜನಿಕರಿಗೆ ಬೇಸರ ಉಂಟಾಗಿದೆ. ಈ ಕಾಮಗಾರಿಯನ್ನು ಸಹ ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದರು.

ಪರ್ಕಳದಲ್ಲಿ ರಸ್ತೆ ಕಾಮಗಾರಿಕೆ ಅಗ್ಯತವಿರುವ ಭೂಮಿ ಸ್ವಾಧಿನಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಲು, ಸಾಣೂರು&-ಬಿಕ್ಕರ್ನಕಟ್ಟೆ ರಸ್ತೆ ಅಭಿವೃದ್ಧಿಗೆ ಬೇಕಿರುವ ಭೂ ಸ್ವಾಧಿನ ಪ್ರಕ್ರಿಯೆ ನಡೆಸಬೇಕು. ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿಯನ್ನು ಪಡೆದು ಕಾಮಗಾರಿಗಳನ್ನು ಪಾರಂಭಿಸಲು ಸೂಚಿಸಿದರು.

ಹೆಜಮಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಮಳೆ ನೀರು ಸಾರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ದಾರಿ ದೀಪಗಳು ಅಳವಡಿಕೆ, ನಿರ್ವಹಣೆ ಮಾಡಬೇಕು. ತಪ್ಪಿದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಇದಕ್ಕೆ ಆಸ್ಪದ ನೀಡಬಾರದು ಎಂದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ಧಾರಿ ಕಾಮಗಾರಿಯಿಂದ ಹಾಳಾಗಿರುವ ಒಳಚರಂಡಿಗಳ ಪುನರ್​ ನಿಮಾರ್ಣ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ, ಸಹಾಯಕ ಕಮೀಷನರ್​ ರಶ್ಮಿ, ನಗರಸಭಾ ಸದಸ್ಯರಾದ ಗಿರೀಶ್​ ಕಾಂಚನ್​ ಹಾಗೂ ಸುಂದರ್​ ಜೆ. ಕಲ್ಮಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net