ಜೂನ್ ಅಂತ್ಯಕ್ಕೆ ಹೆದ್ದಾರಿ ಕಾಮಗಾರಿ ಪೂರ್ಣ

nalin new
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಬಿ.ಸಿ.ರೋಡ್- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಮಳೆಗಾಲ ಮುನ್ನ ರಸ್ತೆ ಕೆಲಸ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತು. ಲಾಕ್‌ಡೌನ್‌ನಿಂದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸ್ವಲ್ಪ ಮಟ್ಟಿನ ಹಿನ್ನಡೆ ಉಂಟಾಗಿದ್ದರೂ ಹೆದ್ದಾರಿ ನಿರ್ಮಾಣ ಕೆಲಸ ಸದ್ಯ ವೇಗ ಪಡೆದುಕೊಂಡಿದೆ.

ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗಿನ ಸುಮಾರು 20 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೊಳ್ಳುತ್ತಿದೆ. ರಸ್ತೆ ನಿರ್ಮಾಣ, ಕಿರು ಸೇತುವೆ, ತಡೆಗೋಡೆ, ಮೋರಿ ನಿರ್ಮಾಣದ ಜತೆಗೆ ರಸ್ತೆ ಪಕ್ಕ ಪೈಪ್‌ಲೈನ್ ಕಾರ್ಯವೂ ಜತೆಯಲ್ಲೇ ನಡೆಯುತ್ತಿದೆ. ಕೆಲವು ದಿನದ ಹಿಂದೆ ಸುರಿದ ಒಂದು ಮಳೆಗೇ ರಸ್ತೆ ಕೆಸರುಮಯವಾಗಿದ್ದು ಮಳೆಗಾಲ ಪೂರ್ತಿ ರಸ್ತೆ ಸ್ಥಿತಿ ಹೇಗಿರಬಹುದು? ರಸ್ತೆಯಲ್ಲಿ ವಾಹನ ಸಂಚಾರ ಹೇಗಿರಬಹುದು ಎಂಬ ಆತಂಕ ಹುಟ್ಟು ಹಾಕಿತ್ತು.

ವೇಗವಾಗಿ ನಡೆಯುತ್ತಿರುವ ಕಾಮಗಾರಿ ಜೂನ್ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್‌ಗಳು ತಿಳಿಸಿದ್ದಾರೆ. 20 ಕಿ.ಮೀ. ಉದ್ದದ ರಸ್ತೆಯಲ್ಲಿ 16 ಕಿ.ಮೀ ಡಾಂಬರು ರಸ್ತೆ ಇದ್ದು ಈ ಪೈಕಿ ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿರುವ 4 ಕಿ.ಮೀ ರಸ್ತೆ ಮಳೆಗಾಲದ ಬಳಿಕವೇ ಡಾಂಬರು ಅಳವಡಿಸಿಕೊಳ್ಳಲಿದೆ.

ಪೈಪ್‌ಲೈನ್ ಬಾಕಿ: ಹೆದ್ದಾರಿ ಪಕ್ಕ ಎಂಆರ್‌ಪಿಎಲ್‌ನ ಪೈಪ್‌ಲೈನ್ ಕೆಲಸ ಬಾಕಿ ಉಳಿದಿದೆ. ಇದರಿಂದ ಪೈಪ್‌ಲೈನ್ ಹಾದುಹೋಗುವ ಪ್ರದೇಶಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆದಿಲ್ಲ. ಪೈಪ್‌ಲೈನ್ ಕೆಲಸ ಪೂರ್ಣಗೊಳಿಸದೆ ಚರಂಡಿ ನಿರ್ಮಾಣವೂ ಕಷ್ಟ. ಆದರೂ ಮಳೆ ನೀರು ಹರಿದು ಹೋಗಲು ತಾತ್ಕಾಲಿಕ ಚರಂಡಿ ನಿರ್ಮಿಸಿಕೊಡುವುದಾಗಿ ಹೆದ್ದಾರಿ ಇಂಜಿನಿಯರ್‌ಗಳು ತಿಳಿಸಿದ್ದಾರೆ.

ಚುರುಕು ಮುಟ್ಟಿಸಿದ ಸಂಸದ, ಶಾಸಕರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದ್ದು ಸ್ಥಳೀಯರಿಂದ ಶಾಸಕರಿಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ರಾಜೇಶ್ ನಾಯ್ಕ್ ಹೆದ್ದಾರಿ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರೊಂದಿಗೆ ರಸ್ತೆ ಕೆಲಸ ವೀಕ್ಷಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮುಗಿಸಿ ಶೀಘ್ರ ರಸ್ತೆ ಬಿಟ್ಟುಕೊಡವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿ.ಸಿ.ರೋಡ್ -ಪುಂಜಾಲಕಟ್ಟೆ ರಸ್ತೆ ನಿರ್ಮಾಣ ಕಾಮಗಾರಿ ಜೂನ್ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯಗೊಳಿಸಿ, ಬಿಟ್ಟುಕೊಡುವುದಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ತಿಳಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇರುವ ಸ್ವಲ್ಪ ಭಾಗ ಮಾತ್ರ ಮುಂದಿನ ಹಂತದಲ್ಲಿ ಪೂರ್ಣಗೊಳ್ಳಲಿದೆ. ರಾಜೇಶ್ ನಾಯ್ಕ್, ಶಾಸಕರು, ಬಂಟ್ವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net