ಹೆದ್ದಾರಿ ಬದಿಯಿಂದ 36 ಟನ್ ತ್ಯಾಜ್ಯ ಸಂಗ್ರಹ

mng--7 april Highway garbage 3
Published on


ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನದಿಂದ ಕೆಪಿಟಿ ತನಕ ವನ ಚಾರಿಟೇಬಲ್ ಟ್ರಸ್ಟ್, ಕೆಪಿಟಿ ಕಾಲೇಜು, ರೋಶನಿ ನಿಲಯ ಕಾಲೇಜಿನ ಎನ್‌ಎಸ್‌ಎಸ್ ಸೇರಿದಂತೆ ವಿವಿಧ ವಿದ್ಯಾರ್ಥಿಗಳನ್ನೊಳಗೊಂಡ 220 ಜನರ ತಂಡದಿಂದ 36 ಟನ್ ತ್ಯಾಜ್ಯವನ್ನು ಪಾಲಿಕೆ ಮೂಲಕ ವಿಲೇವಾರಿ ಮಾಡಲಾಯಿತು.


ಹೆದ್ದಾರಿ ಬದಿ ತ್ಯಾಜ್ಯ ಎಸೆದು ಹೋಗಿರುವ ಬಗ್ಗೆ ವಿಜಯವಾಣಿ ಮಾ.18ರಂದು ‘ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ ರಾಶಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.


ಕೂಳೂರು ಭಾಗದಿಂದ ತಲಪಾಡಿ ಭಾಗದವರೆಗೆ ಹೆದ್ದಾರಿ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳು, ಸಮಯ ಮುಗಿದ ಔಷಧಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಎಸೆದು ಹೋಗಿದ್ದರು. ಹೆದ್ದಾರಿಯಲ್ಲಿ ಸಂಚಾರ ಮಾಡುವ ದೂರದೂರಿಗೆ ಸಂಚರಿಸುವ ವಾಹನಗಳಲ್ಲಿರುವವರು ಕಸ ಎಸೆಯುತ್ತಾರೆ. ಇನ್ನು ನಗರದಲ್ಲಿರುವವರು ಕೂಡ ಮನೆಯಲ್ಲಿ ಪಾಲಿಕೆಯಿಂದ ಕಸ ಸಂಗ್ರಹಿಸುವ ಸಂದರ್ಭದಲ್ಲಿ ನೀಡಲಾಗದಿದ್ದರೆ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಬದಿ ಎಸೆದು ಹೋಗುತ್ತಾರೆ. ಇದರಿಂದ ರಾಶಿಗಟ್ಟಲೆ ಕಸ ಹೆದ್ದಾರಿ ಬದಿಯಲ್ಲಿ ಶೇಖರಣೆಯಾಗಿ ಪರಿಸರದಲ್ಲಿ ಗಬ್ಬು ವಾಸನೆ ಬೀರುತ್ತಿರುತ್ತದೆ.


ಬೇರೆ ನಗರ, ರಾಜ್ಯದ ಜನರನ್ನು ಮಂಗಳೂರಿಗೆ ಸ್ವಾಗತಿಸುವ ರಾಷ್ಟ್ರೀಯ ಹೆದ್ದಾರಿ ಬದಿಗಳನ್ನು ಗಮನಿಸಿದರೆ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿ ಹೋಗಿದೆ. ಶನಿವಾರ ಬೆಳಗ್ಗೆ 7.30ರಿಂದ ರಾತ್ರಿ 8 ಗಂಟೆಯ ತನಕ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡ ಪರಿಸರ ಪ್ರೇಮಿಗಳು ಸ್ವಚ್ಛ ಮಾಡಿದ್ದಾರೆ. ಮತ್ತೆ ಅಲ್ಲಿ ತ್ಯಾಜ್ಯ ಶೇಖರಣೆಯಾಗದಂತೆ ಎಚ್ಚರ ವಹಿಸಬೇಕಾಗಿದೆ.

ಹೆದ್ದಾರಿ ಬದಿಯಲ್ಲಿ ಕಳೆದ 7 ವರ್ಷದಿಂದ ತ್ಯಾಜ್ಯ ತೆರವಿಗೆ ಹೆದ್ದಾರಿ ಇಲಾಖೆ ಕ್ರಮ ಕೈಗೊಂಡಿಲ್ಲ. ರಾಶಿ ರಾಶಿ ತ್ಯಾಜ್ಯವನ್ನು ತೆರವು ಮಾಡಿದ್ದೇವೆ. ಮದ್ಯದ ಬಾಟಲಿ, ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ರೀತಿಯ ತ್ಯಾಜ್ಯ ಎಸೆದು ಹೋಗುತ್ತಾರೆ. ಬಾಟಲಿ ತೆರವು ಮಾಡುವಾಗ ಇಬ್ಬರಿಗೆ ಗಾಯವೂ ಆಗಿದೆ. ಸಾರ್ವಜನಿಕರು ದಯವಿಟ್ಟು ಈ ರೀತಿ ಎಸೆದು ಹೋಗಬಾರದು.
ಜೀತ್ ಮಿಲನ್ ರೋಚನ್
ಕಾರ್ಯದರ್ಶಿ ವನ ಚಾರಿಟೇಬಲ್ ಟ್ರಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net