ಹೆದ್ದಾರಿಬದಿ ಕೆರೆಗಿಲ್ಲ ತಡೆಬೇಲಿ, ಸಾಲಿಗ್ರಾಮ ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾಯ ಭೀತಿ

kere new
Published on

ಕೋಟ: ಸಾಲಿಗ್ರಾಮ ಪಟ್ಟಣಪಂಚಾಯಿತಿ ವ್ಯಾಪ್ತಿಯ ರಸ್ತೆ ಅಂಚಿನಲ್ಲಿರುವ ಬಹುತೇಕ ಕೆರೆಗಳಿಗೆ ತಡೆಬೇಲಿ ಇಲ್ಲದೆ ಅಪಾಯಕ್ಕೆ ಆಹ್ವಾನಿಸುವಂತಿದೆ.

ಕಾರ್ಕಡ ವ್ಯಾಪ್ತಿಯ ಮೂಡೋಳಿ ವಾರ್ಡ್‌ನಿಂದ ಕಾವಡಿ ಸಂಪರ್ಕಿಸುವ ರಸ್ತೆಯ ಸಮೀಪ ಮಟ್ಕೆರೆ ಇದ್ದು ವಾಹನಗಳು ಸಂಚರಿಸಲು ಕಷ್ಟಕರವಾಗಿದೆ. ಅದೇ ವಾರ್ಡ್‌ನಲ್ಲಿ ಬೃಹದಾಕಾರದ ಹೆದ್ದಾರಿಕೆರೆ, ತೆಂಕೋಳಿ ವಾರ್ಡ್‌ನ ಕುಂಜಿಕೆರೆ ಕೂಡ ರಸ್ತೆ ಅಂಚಿನಲ್ಲಿದ್ದು, ಯಾವುದೇ ತಡೆಬೇಲಿ ಇಲ್ಲ. ಸ್ಥಳೀಯಾಡಳಿತ ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅಂತಹ ಕೆರೆಗಳಿಗೆ ತಡೆಗೊಡೆ ಅಥವಾ ಬೇಲಿ ಅಳವಡಿಸಿ ಸಮಸ್ಯೆಯಿಂದ ಮುಕ್ತಿಗಾಣಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆಯಂಚಿನಲ್ಲಿರುವ ಕೆರೆಗಳಿಗೆ ತಡೆಬೇಲಿ ನಿರ್ಮಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯಿತಿ ಅಥವಾ ಜನಪ್ರತಿನಿಧಿಗಳು ಶೀಘ್ರ ಬೇಲಿ ಅಳವಡಿಸಲು ಕ್ರಮಕೈಗೊಂಡರೆ ಉತ್ತಮ.

ರಮೇಶ್ ಮೆಂಡನ್, ಸಾಲಿಗ್ರಾಮ ಕಾರ್ಕಡ ನಿವಾಸಿ

ಮಟ್ಕೆರೆಯ ತಡೆಬೇಲಿ, ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಈಗಾಗಲೇ ಶಾಸಕರ ಬಳಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನು ಒಂದೂವರೆ ತಿಂಗಳೊಳಗೆ ತಡೆಬೇಲಿ ನಿರ್ಮಿಸಲಾಗುವುದು. ಹಾಗೇ ಹೆದ್ದಾರಿ ಕೆರೆಗೆ ಕಾಯಕಲ್ಪ ನೀಡಲು ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು ಕೆರೆ ಅಭಿವೃದ್ಧಿಯ ಜೊತೆಗೆ ಬೇಲಿ ಪೂರ್ಣಗೊಳಿಸಲಾಗುವುದು.

ಸಂಜೀವ ದೇವಾಡಿಗ, ಮೂಡೋಳಿ ವಾರ್ಡ್ ಸದಸ್ಯ ಕಾರ್ಕಡ

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆರೆ ಅಭಿವೃದ್ಧಿಗೆ 5ಲಕ್ಷ ರೂ. ಕಾಯ್ದಿರಿಸಲಾಗಿದೆ. ಅದರಿಂದ ಈ ಕೆರೆಗಳಿಗೆ ಬೇಲಿ ಅಳವಡಿಸುವ ಕಾರ್ಯ ಶೀಘ್ರಗತಿಯಲ್ಲಿ ಮಾಡಲಾಗುವುದು.

ಸುಲತಾ ಹೆಗ್ಡೆ, ಸಾಲಿಗ್ರಾಮ ಪಪಂ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net