

ನರಸಿಂಹ ನಾಯಕ್ ಬೈಂದೂರು
ವೇಗವಾಗಿ ಪ್ರಗತಿ ಹೊಂದುತ್ತಿರುವ ಬೈಂದೂರು ತಾಲೂಕಿನ ಅಭಿವೃದ್ಧಿಗೆ ಕೆಲವು ನಿಯಮಬಾಹಿರ ನಿಲುವುಗಳು, ಹೆದ್ದಾರಿ ಮತ್ತು ಜಿಲ್ಲಾಡಳಿತದ ನಿರ್ಲಕ್ಷ ತೊಡಕಾಗುತ್ತಿದೆ.
ಪಟ್ಟಣ ಪಂಚಾಯಿತಿ ಕೇಂದ್ರಸ್ಥಾನ ಬೈಂದೂರು ಹಾಗೂ ಪಕ್ಕದ ಉಪ್ಪುಂದದಲ್ಲಿ ನಿಯಮ ಬಾಹಿರವಾಗಿ ಕಟ್ಟಡಗಳು ನಿರ್ಮಾಣವಾಗಿದ್ದರೂ ಸಂಬಂಧಿಸಿದ ಇಲಾಖೆ ಮೌನವಾಗಿದೆ. 10 ವರ್ಷಗಳಲ್ಲಿ ಸಾವಿರಾರು ಕಟ್ಟಡಗಳು ನಿರ್ಮಾಣವಾಗಿದ್ದು ಸೂಕ್ತ ದಾಖಲೆಗಳಿಲ್ಲದೆ ಕಡತದಲ್ಲಿ ಮಾತ್ರ ಗುರುತಿಸಲ್ಪಟ್ಟ ನಿದರ್ಶನಗಳಿವೆ.
ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ ಕಟ್ಟಡ ನಿರ್ಮಿಸಬೇಕಾದವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಜತೆಗೆ ಹೆದ್ದಾರಿಯ ಮಧ್ಯಭಾಗದಿಂದ 40 ಮೀ. ಅಂತರ ಕಾಯಬೇಕು. ಜಿಪಂ ರಸ್ತೆ ಪಕ್ಕ ಕಟ್ಟಡ ನಿರ್ಮಿಸಬೇಕಾದರೆ ಕನಿಷ್ಟ 12.5 ಮೀ. ಅಂತರ ಬಿಡಬೇಕು. ಬಳಿಕ ಸೆಟ್‌ಬ್ಯಾಕ್, ಎರಡಕ್ಕಿಂತ ಅಧಿಕ ಮಹಡಿ ನಿರ್ಮಿಸಬೇಕಾದರೆ ಪ್ರತ್ಯೇಕ ಅನುಮತಿ, ಪಾರ್ಕಿಂಗ್, ಅಗ್ನಿಶಾಮಕ ಸೇರಿದಂತೆ ಹಲವು ನಿಯಮಗಳಿವೆ. ಆದರೆ ಉಪ್ಪುಂದದಿಂದ ಬೈಂದೂರಿನ ಹೊಸ ಬಸ್ ನಿಲ್ದಾಣದವರೆಗೆ ಹಾಗೂ ಬೈಂದೂರು ರಥಬೀದಿಗಳಲ್ಲಿ ನಿಯಮ ಪಾಲಿಸದೆ ಹಲವು ಕಟ್ಟಡಗಳು ತಲೆ ಎತ್ತಿವೆ. ಉಪ್ಪುಂದ ಗ್ರಾಪಂ ಹಾಗೂ ಬೈಂದೂರು ಪಪಂ ವ್ಯಾಪ್ತಿಯಲ್ಲಿ 108/15ರಲ್ಲಿ ನಿಯಮಾನುಸಾರ ಅನುಮತಿ ಪಡೆಯದೆ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿರುವ ಕುರಿತು ಗ್ರಾಪಂ ಪಿಡಿಒ ಮೂಲಕ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಹೆದ್ದಾರಿ ಇಲಾಖೆ, ಅಧಿಕಾರಿಗಳ ನಿರ್ಲಕ್ಷೃದ ಕುರಿತು ಸಾಮಾಜಿಕ ಹೋರಾಟಗಾರರು ದಾವೆ ಕೂಡ ಹೂಡಿದ್ದಾರೆ. ಆದರೂ ಅಕ್ರಮಗಳ ತೆರವಿಗೆ ಯಾರೂ ಮುಂದಾಗಿಲ್ಲ.
ಉಪ್ಪುಂದ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ಅನಧಿಕೃತವಾಗಿದ್ದು, ಇದರ ಮಾಲೀಕರು ನಿಯಮಗಳನ್ನು ಪಾಲಿಸಿಲ್ಲ. ನೀರು ಹರಿಯುವ ಚರಂಡಿಗಳಲ್ಲಿ ಮಣ್ಣು ತುಂಬಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೂ ಪತ್ರ ಬರೆದಿದ್ದಾರೆ.
ಬೈಂದೂರು ಪಟ್ಟಣ ಪಂಚಾಯಿತಿ, ಗ್ರಾಪಂ ವ್ಯಾಪ್ತಿ ಅಕ್ರಮ ಕಟ್ಟಡಗಳ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ದಾಖಲೆ ಸಮೇತ ದೂರು ನೀಡಿದಲ್ಲಿ ಜಿಲ್ಲಾಡಳಿತ ಪರಿಶೀಲಿಸಿ ಕ್ರಮಕ್ಕೆ ಸೂಚನೆ ನೀಡಲಿದೆ. ಗ್ರಾಪಂ ವ್ಯಾಪ್ತಿ ನಿಯಮ ಬಾಹಿರವಾಗಿದ್ದಲ್ಲಿ ಜಿಪಂ ಸಿಇಒ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಹೆದ್ದಾರಿ ವ್ಯಾಪ್ತಿಯಲ್ಲಿ ಅಕ್ರಮವಾಗಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪರಿಶೀಲಿಸಲು ಸೂಚನೆ ನೀಡಲಾಗುವುದು.
ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಉಪ್ಪುಂದದಿಂದ ಬೈಂದೂರು ಹೊಸ ಬಸ್ ನಿಲ್ದಾಣದವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಪರವಾನಗಿ ಇಲ್ಲದೆ ನಿಯಮ ಬಾಹಿರವಾಗಿ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ. ಪ್ರಸ್ತುತ ನಿರ್ಮಾಣಗೊಂಡಿರುವ/ಗೊಳ್ಳುತ್ತಿರುವ ಬಹತೇಕ ಕಟ್ಟಡ ಕಾನೂನು ಬಾಹಿರವಾಗಿದೆ. ಇದರಲ್ಲಿ ಹಣ ಹಾಗೂ ರಾಜಕೀಯ ಪ್ರಭಾವ ಮೇಳೈಸಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮರು ಪರಿಶೀಲನೆ ನಡೆಸಿ ಅನಧಿಕೃತ ಕಟ್ಟಡಗಳನ್ನು ಕೆಡವಬೇಕು. ಸಂಚಾರ ಸುಗಮಗೊಳಿಸಬೇಕು.
ವೆಂಕಟೇಶ ಕಾರಂತ, ಸಾಮಾಜಿಕ ಕಾರ್ಯಕರ್ತ ಬೈಂದೂರು