

ವೇಣುವಿನೋದ್ ಕೆ.ಎಸ್ ಮಂಗಳೂರು
ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಹಲವು ಕಾಮಗಾರಿಗಳಿಗೆ ಚುರುಕು ನೀಡಲಾಗಿದೆ.
ಮುಖ್ಯವಾಗಿ ರಸ್ತೆ, ಅಗತ್ಯ ಕಟ್ಟಡ, ತಡೆಗೋಡೆ, ಚರಂಡಿ ಇತ್ಯಾದಿ ಕೆಲಸಗಳನ್ನು ಚುರುಕುಗೊಳಿಸಲು ತೀರ್ಮಾನಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಮುಂಗಾರು ನಿರೀಕ್ಷಿಸಲಾಗಿರುವುದರಿಂದ ಅದಕ್ಕೆ ಮೊದಲು ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಈ ಮೊದಲೇ ಅರ್ಧ ಪೂರ್ಣಗೊಂಡಿದ್ದ ಕಾಮಗಾರಿ ಮುಂದುವರಿಸಲು ತಮ್ಮ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಅದರಂತೆ ಸುರತ್ಕಲ್- ಬಿ.ಸಿ.ರೋಡ್ ಮಧ್ಯೆ ಸುಧಾರಣಾ ಕಾಮಗಾರಿಗಳು ಮುಂದುವರಿಯುತ್ತಿದ್ದು, ನಾಲ್ಕು ದಿನಗಳಿಂದ ಚುರುಕುಗೊಂಡಿವೆ. ಹೆದ್ದಾರಿಯ ಡಾಂಬರೀಕರಣ ನಡೆಸಲಾಗುತ್ತಿದ್ದು, ಬೈಕಂಪಾಡಿ ಕೈಗಾರಿಕಾ ಪ್ರದೇಶ ಜಂಕ್ಷನ್, ಪಣಂಬೂರು ಬೀಚ್‌ಗೆ ತಿರುಗುವ ಜಾಗ, ಕೂಳೂರು ಫ್ಲೈಓವರ್ ಶುರುವಾಗುವ ಕಡೆಗಳಲ್ಲಿ ಕಾಂಕ್ರೀಟ್ ಹಾಕುವ ಕೆಲಸವೂ ಪ್ರಗತಿಯಲ್ಲಿದೆ. ಕೆಲವೊಂದು ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಮುಂಗಾರು ಶುರುವಾದ ನಂತರ ಮಾಡುವಂತಿಲ್ಲ. ಅದನ್ನು ಈಗಲೇ ಮುಗಿಸಲೇಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಗಳ ಅಂತಹ ಕಾಮಗಾರಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆ
ಐದು ತಾಲೂಕುಗಳ ಒಟ್ಟು 39 ಕಾಮಗಾರಿಗಳನ್ನು ತುರ್ತು ಎಂದು ಪರಿಗಣಿಸಿ ಜಿಲ್ಲಾಧಿಕಾರಿ ಅನುಮೋದಿಸಿದ್ದಾರೆ. ಅದರಲ್ಲಿ ಕೆಲವು ಪ್ರಮುಖ ಕಾಮಗಾರಿಗಳು ಇಲ್ಲಿವೆ. ಮಂಗಳೂರು- ಅತ್ರಾಡಿ ರಾಜ್ಯ ಹೆದ್ದಾರಿ 67 ಬಜ್ಪೆ ಬಳಿ ರಸ್ತೆ ತಿರುವು ಸುಧಾರಣೆ, ಬೆಳ್ತಂಗಡಿ- ಬಂಟ್ವಾಳ- ಮೂಲ್ಕಿ ರಾಜ್ಯ ಹೆದ್ದಾರಿ 70 ಮಂಗಳೂರು ಬಳಿ ತಿರುವು ಸುಧಾರಣೆ, ಮಂಗಳೂರು ನೂತನ ಕೇಂದ್ರ ಕಾರಾಗೃಹದ ಜಮೀನಿನ ಸುತ್ತಲೂ ಆವರಣಗೋಡೆ ನಿರ್ಮಾಣ, ಪಶ್ಚಿಮ- ಉತ್ತರ ದಿಕ್ಕಿನ ಕಂದಕಗಳಿಗೆ ರಕ್ಷಣಾ ಗೋಡೆ ನಿರ್ಮಾಣ, ಪುತ್ತೂರು ಉಪ್ಪಿನಂಗಡಿ ಮಧ್ಯೆ ಚತುಷ್ಪಥ ಕಾಮಗಾರಿ, ಪುತ್ತೂರಿನ ಆನೆ ಮಜಲು ಕೋರ್ಟ್ ಸಂಕೀರ್ಣ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿ 2ನೇ ಹಂತ ರಚನೆ ಪ್ಯಾಕೇಜ್ 1 ಮತ್ತು 2ರ ರಸ್ತೆಗಳು, ಬೆಳ್ತಂಗಡಿ ಉಜಿರೆ-ಸುರ್ಯ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿ, ಮಲವಂತಿಗೆ ಗ್ರಾಮದ ವಿದ್ಯಾನಗರದಿಂದ ನಂದಿಕಾಡು ಸಿಂಗನಾರು ಪರಿಶಿಷ್ಟ ಕಾಲನಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಬಂಟ್ವಾಳ ಪೇಟೆ ಜಿಲ್ಲಾ ಮುಖ್ಯರಸ್ತೆಯ ಆಯ್ದ ಭಾಗಗಳ ನಿರ್ಮಾಣ ಹಾಗೂ ಮಳೆನೀರಿನ ಕಾಂಕ್ರೀಟ್ ಚರಂಡಿ ನಿರ್ಮಾಣ, ಮಣಿನಾಲ್ಕೂರು ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ.
ಷರತ್ತುಗಳು: ಕಾಮಗಾರಿ ಕೈಗೊಳ್ಳುವಾಗ ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ಸ್ಥಳದಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಶ್ ಲಭ್ಯವಿರುವುದು, 10 ಕಾರ್ಮಿಕರು ಮಾತ್ರವೇ ಭಾಗವಹಿಸುವುದು, ಕೆಲಸದ ಸ್ಥಳದಲ್ಲಿ ಶಿಫ್ಟ್ ಮಧ್ಯೆ 1 ಗಂಟೆ ಅಂತರ ನೀಡುವುದು, ಕಾಮಗಾರಿಯಲ್ಲಿ ಬಳಸುವ ಉಪಕರಣ, ವಾಹನಗಳನ್ನು ಸೋಂಕು ರಹಿತಗೊಳಿಸುವುದು ಇತ್ಯಾದಿ ಷರತ್ತುಗಳನ್ನು ಹಾಕಲಾಗಿದೆ.
ತುರ್ತು ಕಾಮಗಾರಿಗೆ ಬೇಕಾದ ಸಿಮೆಂಟ್, ಜಲ್ಲಿ, ಮರಳು ಇತ್ಯಾದಿ ನಮ್ಮ ಸಂಗ್ರಹದಲ್ಲಿ ಈಗಾಗಲೇ ಇದೆ. ಅದನ್ನೇ ಬಳಸಿಕೊಂಡು ಅಗತ್ಯ ಕಾಮಗಾರಿಗಳನ್ನು ಮುಂಗಾರು ಶುರುವಾಗುವ ಮೊದಲೇ ಪೂರ್ಣಗೊಳಿಸುವುದು ನಮ್ಮ ಗುರಿ. - ಯಶವಂತ್, ಪಿಡಬ್ಲುೃಡಿ ಕಾರ್ಯನಿರ್ವಾಹಕ ಇಂಜಿನಿಯರ್ ಮಾರ್ಚ್‌ನಲ್ಲಿ ಕೆಲದಿನ ಕೆಲಸ ನಿಂತಿತ್ತು, ಆದರೆ ಇಲ್ಲಿ ಮಳೆ ಬೇಗ ಶುರುವಾಗುವ ಕಾರಣದಿಂದಾಗಿ ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿ, ಕೆಲಸ ಮುಂದುವರಿಸುತ್ತಿದ್ದೇವೆ, ಡಾಮರು ಹಾಕುವುದು ಹಾಗೂ ಆಯ್ದ ಭಾಗಗಳಲ್ಲಿ ಕಾಂಕ್ರೀಟೀಕರಣ ನಡೆಯುತ್ತಿದೆ. - ಶಿಶುಮೋಹನ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ