

ಶೃಂಗೇರಿ: ನೆನಗುದಿಗೆ ಬಿದ್ದಿರುವ ತನಿಕೋಡು ಗೇಟ್‌ನಿಂದ ಮಾಳದವರೆಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ದೆಹಲಿಯಲ್ಲಿ ಈಗಾಗಲೇ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯೊಂದಿಗೆ ಮಾತುಕತೆ ನಡೆಸಲಾಗಿದೆ. ರಸ್ತೆ ಅಭಿವೃದ್ಧಿಗಾಗಿ ಅಂದಾಜು 400 ಕೋಟಿ ರೂ. ನೀಡಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಜು.21ರ ನಂತರ ದೆಹಲಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಲಿದ್ದು, ಅಧಿಕಾರಿಗಳನ್ನು ದೆಹಲಿಗೆ ಬರುವಂತೆ ಸೂಚಿಸಲಾಗಿದೆ ಎಂದರು.
ಶೃಂಗೇರಿ ಪಟ್ಟಣದ ಸಮೀಪ ನಿರ್ಮಾಣವಾಗುತ್ತಿರುವ ಐದು ಕಿಮೀ ರಸ್ತೆ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದಕ್ಕಿರುವ ಅಡೆ ತಡೆ ನಿವಾರಿಸಿ, ಭೂಸ್ವಾಧಿನ ಪ್ರಕ್ರಿಯೆ ತ್ವರಿತವಾಗಿ ಮಾಡಬೇಕು. ಇದು ತುರ್ತು ಸಭೆಯಾಗಿದ್ದು, ಶೀಘ್ರ ಮತ್ತೊಂದು ಸಭೆ ನಡೆಸಲಾಗುವುದು ಎಂದರು.
ಮಾಜಿ ಸಚಿವ ಡಿ.ಎನ್.ಜೀವರಾಜ್, ತಹಸೀಲ್ದಾರ್ ಗೌರಮ್ಮ, ಜೆಡಿಎಸ್ ಉಪಾಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಬಿ.ಶಿವಶಂಕರ್,ಬಿಜೆಪಿ ಮುಖಂಡರಾದ ನೂತನ ಕುಮಾರ್, ಎಚ್.ಎಸ್.ನಟೇಶ್, ವೇಣುಗೋಪಾಲ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮಂಜುನಾಥ್,ನಟೇಶ್‌ಕುಮಾರ್ ಮತ್ತಿತರರು ಇದ್ದರು.