

ಮಡಿಕೇರಿ:
ಬಹು ನಿರೀಕ್ಷಿತ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆಗಳಿವೆ. ಈ ಸಂಬಂಧ ಪೂರ್ವಭಾವಿ ಕೆಲಸಗಳು ಭರದಿಂದ ನಡೆಯುತ್ತಿದೆ. ಯೋಜನೆಯನ್ನು ಸವಾಲಾಗಿ ತೆಗೆದುಕೊಂಡಂತಿರುವ ಸಂಸದ ಪ್ರತಾಪ್ ಸಿಂಹ ಮೇಲಿಂದ ಮೇಲೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಕಾಮಗಾರಿ ಹಿನ್ನೆಲೆಯಲ್ಲಿ ಬೃಹತ್ ವಾಹನಗಳು ಈಗಾಗಲೇ ನಿಗದಿತ ಸ್ಥಳಗಳಲ್ಲಿ ಬೀಡು ಬಿಟ್ಟಿವೆ.
ಈ ರಸ್ತೆ ಮೊದಲ ಹಂತದಲ್ಲಿ ಕುಶಾಲನಗರದ ಬಸವನಹಳ್ಳಿ ತನಕ ನಿರ್ಮಾಣ ಆಗಲಿದೆ. ಮುಂದಿನ ವರ್ಷದ ಡಿಸೆಂಬರ್ ಅಂತ್ಯಕ್ಕೆ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಸಂಸದ ಪ್ರತಾಪ್‌ಸಿಂಹ ಈಗಾಗಲೇ ಭರವಸೆ ನೀಡಿದ್ದಾರೆ. ೯೨ ಕಿಮೀ ಉದ್ದದ ೪,೧೩೦ ಕೋಟಿ ರೂ. ವೆಚ್ಚದ ಈ ಹೆದ್ದಾರಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಿಂದ ಆರಂಭವಾಗಲಿದೆ. ಈ ಯೋಜನೆಗೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ.
ಭೂಸ್ವಾಧೀನ, ಸೆಸ್ಕ್, ಕೆಪಿಟಿಸಿಎಲ್, ಪವರ್ ಗ್ರಿಡ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ನಗರ ಕುಡಿಯುವ ನೀರು ಸರಬರಾಜು ಇಲಾಖೆ, ಕಾವೇರಿ ನಿರಾವರಿ ನಿಗಮ, ತೋಟಗಾರಿಕೆ ಇಲಾಖೆಯಿಂದ ಆಗಬೇಕಾದ ಕೆಲಸಗಳು ಬಹುತೇಕ ಮುಕ್ತಾಯದ ಹಂತದಲ್ಲಿದೆ. ಬೇಸ್ ಕ್ಯಾಂಪ್‌ಗಳನ್ನೂ ನಿರ್ಮಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗಳು ಜು. ೩೦ರೊಳಗೆ ಮುಕ್ತಾಯವಾಗುವ ಸಾಧ್ಯತೆ ಇದೆ.
ಕಾಮಗಾರಿ ಐದು ಹಂತಗಳಲ್ಲಿ ನಡೆಯಲಿದ್ದು ಮೂವರು ಗುತ್ತಿಗೆದಾರರಿಗೆ ಕಾಮಗಾರಿ ಹೊಣೆಗಾರಿಕೆ ನೀಡಲಾಗಿದೆ. ಬೆಂಗಳೂರಿನಿಂದ ಹುಣಸೂರು, ಪಿರಿಯಾಪಟ್ಟಣ, ನಾಗರಹೊಳೆ, ಕೇರಳ, ಮಡಿಕೇರಿ, ಗೋಣಿಕೊಪ್ಪಕ್ಕೆ ತೆರಳುವವರು ಅನಾವಶ್ಯಕವಾಗಿ ಮೈಸೂರು ನಗರದ ಒಳಗೆ ಪ್ರವೇಶಿಸುವುದು ಈ ಹೆದ್ದಾರಿಯಿಂದ ತಪ್ಪಿದಂತಾಗುತ್ತದೆ. ಬಿಳಿಕೆರೆ, ಹುಣಸೂರು, ಪಿರಿಯಾಪಟ್ಟಣ ಭಾಗದಲ್ಲಿ ಕೈಗಾರಿಕೆಗಳು ವಿಸ್ತರಣೆಗೊಂಡು ಈ ಭಾಗದಲ್ಲಿ ಉದ್ಯೋಗವಕಾಶ ಹೆಚ್ಚುವುದಲ್ಲದೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗಲಿದೆ ಎನ್ನುವ ನಿರೀಕ್ಷೆಗಳಿದೆ.
ಹಾಲಿ ಇರುವ ರಾಷ್ಟ್ರೀಯ ಹೆದ್ದಾರಿ ೨೭೫ಕ್ಕೆ ಸಮಾನಾಂತರಾವಾಗಿ ಈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ಯೋಜನೆ ರೂಪಿಸಲಾಗಿದ್ದು, ಹುಣಸೂರು, ಬೈಲಕುಪ್ಪೆ, ಕುಶಾಲನಗರದಲ್ಲಿ ಬೈಪಾಸ್ ನಿರ್ಮಾಣವೂ ಯೋಜನೆಯಲ್ಲಿ ಸೇರಿದೆ. ಇದಲ್ಲದೆ ಸೇತುವೆಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳನ್ನು ಕೂಡ ನಿರ್ಮಿಸುವ ಯೋಜನೆ ಇದೆ. ೪೫ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಪ್ರಸ್ತಾಪವೂ ಇದೆ. ಇದೀಗ ಕಾಮಗಾರಿಗೆ ಭರದ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕುಶಾಲನಗರದಿಂದ ಮಡಿಕೇರಿ ತನಕ ಹೆದ್ದಾರಿ ವಿಸ್ತರಣೆ ಆಗಲೇಬೇಕು. ಲೋಕಸಭಾ ಚುನಾವಣೆ ಸಂದರ್ಭದಲ್ಲಾದರೂ ಕಾಮಗಾರಿ ನಡೆದು ಮುಕ್ತಾಯವಾಗಲಿ. ಕೊಡಗು ಪ್ರವಾಸೋದ್ಯಮದಲ್ಲಿ ಬೆಳೆಯಬೇಕಾದರೆ, ಉತ್ತಮ ರಸ್ತೆ ವ್ಯವಸ್ಥೆ ಇರಬೇಕು. ಕಳಪೆ ಕಾಮಗಾರಿ ನಡೆಯದಂತೆ ಸಂಸದರು ಎಚ್ಚರ ವಹಿಸಬೇಕು.
ಎ.ವಿ. ದರ್ಶನ್, ಸೋಮವಾರಪೇಟೆ
ಒಂದು ಊರು ಅಭಿವೃದ್ಧಿ ಆಗಬೇಕಾದರೆ ರಸ್ತೆಗಳು ಚೆನ್ನಾಗಿ ಇರಬೇಕು. ಈಗ ಕೊಡಗಿಗೆ ಉತ್ತಮ ರಸ್ತೆಯ ಅವಶ್ಯಕತೆ ಇದೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕಾಮಗಾರಿ ನಡೆಸಿದರೆ ಒಳ್ಳೆಯದು.
ಕಲ್ಲುಮುಟ್ಲು ಚಿಂತು, ಕೃಷಿಕ, ಗೋಣಿಕೊಪ್ಪ
ರಸ್ತೆ ಕಾಮಗಾರಿ ಆರಂಭ ಮಾಡುವ ಮೊದಲು ಅವಶ್ಯವಿರುವ ಎಲ್ಲ ಪೂರ್ವ ತಯಾರಿ ಮಾಡಿಕೊಂಡರೆ ಒಳ್ಳೆಯದು. ಅರ್ಧಂಬರ್ಧ ಮಾಡಿ ನಿಲ್ಲಸದಿದ್ದರೆ ಸಾಕು. ಗುಣಮಟ್ಟದ ಕಾಮಗಾರಿ ನಡೆಸಬೇಕು ಎನ್ನುವ ಮನವಿಯನ್ನು ಮಾಡಿಕೊಳ್ಳುತ್ತೇನೆ. ಕುಶಾಲನಗರಕ್ಕೆ ಬೈಪಾಸ್ ರಸ್ತೆ ಆಗುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗೆ ಹೊಡೆತ ಬೀಳುವ ಆತಂಕವಿದೆ.
ಮಣಿಕಂಠ, ಸಾಮಾಜಿಕ ಕಾರ್ಯಕರ್ತ, ಕುಶಾಲನಗರ
ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು. ಮೈಸೂರು - ಬೆಂಗಳೂರು ಎಕ್ಸಪ್ರೆಸ್ ಹೈವೇಯಲ್ಲಿ ಇರುವ ಲೋಪಗಳನ್ನು ಸರಿಯಾಗಿ ಅರ್ಥೈಸಿಕೊಂಡು ಇಲ್ಲಿ ಅದು ಪುನರಾವರ್ತನೆ ಆಗದ ರೀತಿಯಲ್ಲಿ ನಿಗಾವಹಿಸಬೇಕು. ಸುಮ್ಮನೆ ಯಾರದ್ದೋ ಆತುರಕ್ಕೆ ಮಾಡಬಾರದು. ಕುಶಾಲನಗರ ಪಟ್ಟಣ ಮೂಲಕವೇ ಹೈವೇ ಹಾದು ಹೋದರೆ ನಗರಕ್ಕೂ ಒಳ್ಳೆಯದು. ವ್ಯಾಪಾರ ವಹಿವಾಟು ಚೆನ್ನಾಗಿರುತ್ತದೆ.
ಪ್ರೀತಿ ಶೇಖರ್, ಗೃಹಿಣಿ, ಕುಶಾಲನಗರ
ಬಹಳ ಹಿಂದೆಯೇ ಮೈಸೂರು - ಮಡಿಕೇರಿ ಹೆದ್ದಾರಿಯ ಟೆಂಡರ್ ಮತ್ತು ಉಳಿದ ಪ್ರಕ್ರಿಯೆಗಳು ನಡೆದಿತ್ತು. ಈಗ ಹೆದ್ದಾರಿ ವಿಸ್ತರಣಾ ಕಾಮಗಾರಿಗೆ ದಿಢೀರ್ ಎಂದು ವೇಗ ಪಡೆದುಕೊಂಡಿರುವುದು ಸ್ವಾಗತಾರ್ಹ. ಯಾವುದೇ ರೀತಿಯ ಅಭಿವೃದ್ಧಿಗೆ ರಸ್ತೆಗಳ ಪಾತ್ರ ಗಣನೀಯ ಕೊಡುಗೆ ನೀಡುತ್ತದೆ. ಕುಶಾಲನಗರಕ್ಕೆ ಬೈಪಾಸ್ ನಿರ್ಮಾಣದಿಂದ ಖಂಡಿತ ಪ್ರತಿಕೂಲ ಪರಿಣಾಮ ಬೀರಬಹುದು. ಮುಖ್ಯವಾಗಿ ಹೋಟೇಲ್ ಉದ್ಯಮಕ್ಕೆ ಹೊಡೆತ ಬೀಳಬಹುದು.
ರವೀಂದ್ರ ರೈ, ಅಧ್ಯಕ್ಷ, ಚೇಂಬರ್ ಅಫ್ ಕಾಮರ್ಸ್, ಕುಶಾಲನಗರ ಸ್ಥಾನೀಯ ಸಮಿತಿ
ಮೈಸೂರು - ಮಡಿಕೇರಿ ಹೆದ್ದಾರಿ ಕೆಲಸ ಪ್ರಾರಂಭ ಆಗುತ್ತಿರುವುದು ಸಂತೋ?ದ ವಿ?ಯ. ಆದರೆ ಇದು ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಾಗಿಟ್ಟುಕೊಂಡು ಮಾಡದಿರಲಿ, ರಸ್ತೆ ಬದಿಯಲ್ಲಿ ಆಸ್ತಿ ಪಾಸ್ತಿ ಕಳಕೊಳ್ಳುವವರಿಗೆ ಮೊದಲು ಪರಿಹಾರ ನೀಡಲಿ. ಚುನಾವಣೆ ಮುಗಿದ ಮೇಲೆ ಅರ್ಧಕ್ಕೆ ನಿಲ್ಲದಿರಲಿ. ಈ ಹಿಂದೆ ರೈಲು ತರುವ ವಿಚಾರದಲ್ಲೇ ಕೊಡಗಿನ ಜನರು ಬೇಸತ್ತಿದ್ದಾರೆ, ಆ ರೀತಿ ಈ ರಸ್ತೆ ಆಗದಿರಲಿ. ಚುನಾವಣೆಗಳು ಸಮಿಪಿಸುವಾಗ ಪ್ರಾರಂಭವಾಗುವ ಕೆಲಸ ಮತ್ತೆ ಮುಂದುವರಿಯುವುದಿಲ್ಲ.
ಸರ್ದಾರ್ ಅಹಮ್ಮದ್, ಉಪಾಧ್ಯಕ್ಷ, ಗ್ರಾಮ ಪಂಚಾಯತಿ, ಶನಿವಾರಸಂತೆ
ಮೈಸೂರು - ಮಡಿಕೇರಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಆಗುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಈ ಕಾಮಗಾರಿ ಮುಂದೆ ಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ತರಾತುರಿಯಲ್ಲಿ ಮಾಡಿ ಕಳಪೆ ಕೆಲಸಕ್ಕೆ ಅವಕಾಶ ಕೊಡದೆ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಡಿ ಎಂದು ಒತ್ತಾಯಿಸುತ್ತೇವೆ. ಅದರೊಂದಿಗೆ ಈ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಭೂಮಿ ಕಳೆದುಕೊಂಡಿರುವಂಥ ರೈತರಿಗೆ ಹಾಗೂ ಮನೆಗಳನ್ನು ಕಳೆದುಕೊಂಡಿರುವವರಿಗೆ ಸರ್ಕಾರ ಸೂಕ್ತ ಪರಿಹಾರವನ್ನು ವಿಳಂಬ ಮಾಡದೆ ಆದ?್ಟು ಬೇಗನೆ ನೀಡಬೇಕು.
ಅನಿಲ್, ನಾಗರಿಕ ಹೋರಾಟ ಸಮಿತಿ, ಸಿದ್ದಾಪುರ
ಕಾಡು ನಾಶಪಡಿಸಿ ಅಭಿವೃದ್ಧಿಪಡಿಸುವುದು ಸರಿಯಲ್ಲ. ಪರಿಸರಕ್ಕೆ ಮಾರಕವಾಗದ ರೀತಿ ಅಭಿವೃದ್ಧಿ ಕಾರ್ಯವಾಗಬೇಕು. ರಸ್ತೆ ಅಗಲೀಕರಣ ನೆಪದಲ್ಲಿ ನೂರಾರು ಮರಗಳ ಹನನವಾಗುತ್ತದೆ. ಘಾಟಿಯಲ್ಲಿ ರಸ್ತೆ ಅಗಲೀಕರಣ ಮಾಡುವುದರಿಂದ ಬರೆ ಕುಸಿತದಂತ ಅನಾಹುತಗಳೂ ಸಂಭವಿಸಬಹುದು.
ಹೆದ್ದಾರಿಗಳ ನಿರ್ಮಾಣ ದೇಶದ ಪ್ರಗತಿಯ ಸಂಕೇತ. ಮೈಸೂರು - ಕೊಡಗು ಹೆದ್ದಾರಿ ವಿಸ್ತರಣೆ ಕಾಮಗಾರಿ ನಮ್ಮೆಲ್ಲರ ಸೌಭಾಗ್ಯ. ಸಂಸದ ಪ್ರತಾಪ್ ಸಿಂಹ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು, ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಹೆದ್ದಾರಿ ಆದಷ್ಟು ಶೀಘ್ರ ಮಡಿಕೇರಿ ತನಕ ವಿಸ್ತರಣೆಗೊಂಡರೆ ಕೊಡಗಿನ ಜನರ ಅಭಿವೃದ್ಧಿಯ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಹೆದ್ದಾರಿ ಕೊಡಗಿನ ಮಧ್ಯಭಾಗದಲ್ಲಿ ಒಂದು ಗಡಿಯಿಂದ ಮತ್ತೊಂದು ಗಡಿಗೆ ವಿಸ್ತರಣೆಗೊಂಡಲ್ಲಿ ಸಮಗ್ರ ಅಭಿವೃದ್ಧಿಗೆ ಸಹಕಾರಿ ಆಗುವುದು. ಇದಕ್ಕೆ ಪರಿಸರ ಪ್ರೇಮಿಗಳೂ ಸಹಕರಿಸಬೇಕು.
ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಅಭಿವೃದ್ಧಿ ಕಾಮಗಾರಿ ಮುಂದಿನ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪೂರ್ಣವಾಗಲಿದೆ. ಮೈಸೂರಿನಿಂದ ಕುಶಾಲನಗರ ತನಕ ನಡೆಯಲಿರುವ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಕೇಂದ್ರಗಳಲ್ಲಿ ಕಾಮಗಾರಿಗೆ ಅವಶ್ಯಕತೆ ಇರುವ ಯಂತ್ರೋಪಕರಣಗಳು ಬೀಡು ಬಿಟ್ಟಿದ್ದು, ಪ್ರಾಥಮಿಕ ಕಾಮಗಾರಿಗಳು ನಡೆಯುತ್ತಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಬಾಕಿ ಇದೆ. ಹೆದ್ದಾರಿ ನಿರ್ಮಾಣ ನಂತರ ಕೊಡಗಿನ ಕುಶಾಲನಗರ ತಾಲೂಕಿನ ಹಲವು ಪ್ರದೇಶಗಳು ಅಭಿವೃದ್ಧಿಗೊಳ್ಳಲಿದೆ.
ಪ್ರತಾಪ್ ಸಿಂಹ, ಕೊಡಗು-ಮೈಸೂರು ಕ್ಷೇತ್ರದ ಸಂಸದ