ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ : ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಹೋಟೆಲ್ ಮಾಲೀಕನ ಏಕಾಂಗಿ ಹೋರಾಟ

protest
ವಾಹನ ಸವಾರರ ಪರದಾಟ ಗಮನಿಸಿ ಉಜಿರೆಯ ಹೋಟೆಲ್ ಮಾಲೀಕರೋರ್ವರು ರಸ್ತೆಯಲ್ಲೇ ಕುಳಿತು ಹೋರಾಟ ಮಾಡಿದರು.
Published on

ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿ 73ರ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಗಲೀಕರಣ ಕಾಮಗಾರಿ ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ.ವಾಹನ ಸವಾರರು ರಸ್ತೆಯಲ್ಲಿ ಬೀಳುತ್ತಿರುವುದನ್ನು ಗಮನಿಸಿ ಉಜಿರೆಯ ಹೋಟೆಲ್ ಮಾಲೀಕರೋರ್ವರು ಏಕಾಂಗಿಯಾಗಿ ರಸ್ತೆ ಮಧ್ಯೆ ಕುಳಿತು ಭಾನುವಾರ ಹೋರಾಟ ನಡೆಸಿದ್ದಾರೆ.

ಉಜಿರೆಯಿಂದ ಮುಂಡಾಜೆ ಸಾಗುವ ರಸ್ತೆ, ಬೆಳ್ತಂಗಡಿಯಿಂದ ಮುಂದಕ್ಕೆ ಕಾಶಿಬೆಟ್ಟು ಸಮೀಪ ಮಡಂತ್ಯಾರಿಂದ ಮುಂದಕ್ಕೆ ಬರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಏರುಪೇರಾದರು ಬಿದ್ದು ಅನಾಹುತ ಸಂಭವಿಸುತ್ತಿದೆ. ಉಜಿರೆಯಲ್ಲಿ ಹೆದ್ದಾರಿ ಕೆಸರುಮಯವಾದ ಪರಿಣಾಮ ಎರಡು-ಮೂರು ದ್ವಿಚಕ್ರ ಸವಾರರು ಅಪಾಘಾತಕ್ಕೀಡಾಗಿದ್ದಾರೆ. ಚಾರ್ಮಾಡಿ ಮುಂಡಾಜೆಯಲ್ಲಂತೂ ಹೆದ್ದಾರಿ ತೀವ್ರ ಹದಗೆಟ್ಟು ಸ್ಥಳೀಯ ಪ್ರವಾಸಿ ವಾಹನಗಳು ಪ್ರತಿನಿತ್ಯ ಪರದಾಡುವುದು ಮುಂದುವರಿದಿದೆ. ಮಳೆ ಬೀಳುತ್ತಿದ್ದಂತೆ ಅಗೆದು ಹಾಕಲಾದ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗುತ್ತಿದ್ದು, ಕೆಲವು ಕಡೆ ವಾಹನಗಳು ಹೂತು ಹೋಗಿ ಸಂಚಾರ ವ್ಯತ್ಯಯ ಉಂಟಾಗುತ್ತಿದೆ. ಈ ಪರಿಸ್ಥಿತಿಯನ್ನು ನೋಡಿಯೂ ಕೈ ಕುಟ್ಟಿ ಕುಳಿತಿರುವ ಗುತ್ತಿಗೆದಾರ ಕಂಪನಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ

ಬೇಸಿಗೆಯಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದು ಹಾಕಿದ್ದ ಗುತ್ತಿಗೆದಾರರು ಮಳೆಗಾಲದ ಮುನ್ನ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಇಲ್ಲವೇ ತಾತ್ಕಾಲಿಕ ಡಾಂಬರೀಕರಣವಾದರೂ ಮಾಡಬೇಕಿತ್ತು. ಇದು ಯಾವುದೂ ಇಲ್ಲದೆ, ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ದ್ವಿಚಕ್ರ, ತ್ರಿಚಕ್ರ, ಕಾರು ಚಾಲಕರಿಗೆ ಆಪತ್ತು ಎದುರಾಗಿದೆ. ತಕ್ಷಣ ಸೂಕ್ತ ಕ್ರಮ ವಹಿಸಬೇಕು. ಇಲ್ಲವೇ ನಿರಂತರ ಹೋರಾಟ ನಡೆಸುವುದಾಗಿ ಉಜಿರೆ ಹೋಟೆಲ್ ಮಾಲೀಕ, ಕಾಂಗ್ರೆಸ್ ಮುಖಂಡ ಪ್ರವೀಣ್ ಹಳ್ಳಿಮನೆ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net