

ಉಡುಪಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಕಟ್ಟಿ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹೆದ್ದಾರಿ ನಿರ್ವಹಣೆಯನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ದೂರು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನ್ಸೂನ್ ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ. ರಸ್ತೆ ಬದಿಯ ಬೀದಿದೀಪಗಳು ನಿರ್ವಹಣೆ ಸರಿಯಿಲ್ಲ ಎಂಬ ದೂರುಗಳಿವೆ. ಈ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದರು.
ಸ್ಥಳಿಯರು ರಸ್ತೆ ಕುಂದುಕೊರತೆ ಬಗ್ಗೆ ದೂರು ನೀಡಿದಾಗ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸ್ಪಂದಿಸಬೇಕು. ರಸ್ತೆ ನಿರ್ವಹಣೆ ಕಾಮಗಾರಿಗಳನ್ನು ಆಗಿಂದಾಗ್ಗೆ ಸಮನ್ವಯದೊಂದಿಗೆ ಕೈಗೊಂಡು ಕಾರ್ಯನಿರ್ವಹಿಸಿದಾಗ ಜಿಲ್ಲಾಡಳಿತಕ್ಕೆ ದೂರುಗಳು ಬರುವುದಿಲ್ಲ ಎಂದರು.
ಬ್ರಹ್ಮಾವರದಲ್ಲಿ ಸರ್ವೀಸ್ ರಸ್ತೆ, ಮೀಡಿಯನ್ ಓಪನಿಂಗ್, ಮೇಲ್ಸೇತುವೆ ವ್ಯವಸ್ಥೆ ಬೇಕು ಎನ್ನುವ ಬಗ್ಗೆ ಸ್ಥಳಿಯ ಜನರು ಮನವಿ ಮಾಡುತ್ತಿದ್ದಾರೆ. ಈ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ರಸ್ತೆ ವಿಭಜಕ ತೆರವಿಗೆ, ರಸ್ತೆ ಸುರಕ್ಷತಾ ಸಭೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ವರದಿ ಆಧರಿಸಿ, ತೀಮಾರ್ನ ತೆಗೆದುಕೊಳ್ಳಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಮಾತನಾಡಿ, ಜನರ ಕುಂದು ಕೊರತೆಗೆ ಸಂಬಂಧಿಸಿದಂತೆ ಆನ್ಲೈನ್ ಆಪ್ ನಿರ್ವಹಣೆ ಮಾಡುತ್ತಿದ್ದು, ಯಾವುದೇ ಸಮಸ್ಯೆಗಳಿದ್ದಲ್ಲಿ ಇದಕ್ಕೆ ಅಪ್ಲೋಡ್ ಮಾಡುವುದು ಸೂಕ್ತ . ಟೋಲ್ನ ಸಮೀಪದ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ವಿನಾಯಿತಿ ಈ ಹಿಂದಿನಂತೆ ನೀಡಲಾಗುತ್ತದೆ. ಆದರೆ ವಾಣಿಜ್ಯ ವಾಹನಗಳಿಗೆ ಇದು ಅನ್ವಯಿಸುವುದಿಲ್ಲ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ತಹಶೀಲ್ದಾರರು ಉಪಸ್ಥಿತರಿದ್ದರು.