

ಉಡುಪಿ: ರಾಷ್ಟೀಯ ಹೆದ್ದಾರಿಯ ಇಂದ್ರಾಳಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿ ಜ.7ರೊಳಗೆ ಪೂರ್ಣಗೊಳಿಸಿ, 10 ರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ರಾ.ಹೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕಳೆದ ಮೂರು ವರ್ಷದಿಂದ ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರೂ ಸಹ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಇರುವುದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತಗಳು ಸಹ ಕಾಮಗಾರಿಯ ವಿಳಂಬದಿಂದಾಗಿ ಉಂಟಾಗಿವೆ. ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಪ್ರತಿ ವಾರಕ್ಕೊಮ್ಮೆ ಕಾಮಗಾರಿ ಪ್ರಕ್ರಿಯೆಯ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು. ಮೇಲ್ಸೇತುವೆ ಕಾಮಗಾರಿಗೆ ಈಗಾಗಲೇ ರೈಲ್ವೆ ಇಲಾಖೆಯಿಂದ ಅನುಮತಿ ನೀಡಲಾಗಿದ್ದು, ಸಿವಿಲ್ ಕಾಮಗಾರಿ ಹಾಗೂ ಕಬ್ಬಿಣದ ಬ್ರಿಡ್ಜ್ನ ಜೋಡಣೆ ಕಾಮಗಾರಿಗಳನ್ನು ಹಗಲು ಹಾಗೂ ರಾತ್ರಿ ಎರಡು ಪಾಳಯದಲ್ಲಿ ಕಾರ್ಮಿಕರನ್ನು ನಿಯೋಜಿಸಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಕಾಮಗಾರಿಯನ್ನು ಕೈಗೊಳ್ಳುವಾಗ ಸುರಕ್ಷತೆಗೆ ಆದ್ಯತೆಯನ್ನು ನೀಡಬೇಕು. ರೈಲು ಸಾಗಾಣಿಕೆಗೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕೊಂಕಣ ರೈಲ್ವೆಯ ಸೀನೀಯರ್ ಇಂಜಿನಿಯರ್ ಗೋಪಾಲಕೃಷ್ಣ, ಶೃಂಗೇರಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಮತ್ತಿತರರು ಉಪಸ್ಥಿತರಿದ್ದರು.