

ಮೈಸೂರು: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯಿಂದ ಡಿ.20ರಿಂದ ವಿವಿಧೆಡೆ ‘ರಾಷ್ಟ್ರೀಯ ರೈತರ ಮಹಾಧಿವೇಶನ’ ಆಯೋಜಿಸಲಾಗಿದೆ.
ವಿಶ್ವ ರೈತ ದಿನದ ಅಂಗವಾಗಿ ಕಿಸಾನ್ ಮಹಾ ಪಂಚಾಯತ್ ವತಿಯಿಂದ ಕೇರಳದ ಪಾಲಕಾಡಿನಲ್ಲಿ ಡಿ.20ರಂದು, ತಮಿಳುನಾಡಿನ ಚೆನ್ನೈನಲ್ಲಿ 21ರಂದು, ಬೆಂಗಳೂರಿನಲ್ಲಿ 23ರಂದು, ತೆಲಂಗಾಣದ ಹೈದರಾಬಾದ್‌ನಲ್ಲಿ 26ರಂದು ಬೃಹತ್ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ. ರೈತರ ಶಕ್ತಿ ಪ್ರದರ್ಶನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದ ಎಲ್ಲ ರೈತರು ರಾಜಕೀಯೇತರವಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದು, ರಾಜ್ಯದಲ್ಲಿ 23ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಾಲ ಮನ್ನಾ ಕೋರಿಕೆ ಅರ್ಜಿ ಸಲ್ಲಿಸಲಾಗುವುದು. ಸಾಲ ಪಡೆದ ರೈತರು ಮಹಾಧಿವೇಶನಕ್ಕೆ ಸ್ವಯಂ ಪ್ರೇರಿತರಾಗಿ ಬರಬೇಕು ಎಂದು ಕೋರಿದರು.
ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಎಂಬುದು ನಾಟಕ. ಇದರಿಂದ ಪ್ರಯೋಜನವಿಲ್ಲ. ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ ಕುರುಬೂರು ಶಾಂತಕುಮಾರ್, ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕ್‌ಗಳು ಬಡ್ಡಿ ದುಪ್ಪಟ್ಟು ಮಾಡಿವೆ. ಸುಸ್ತಿದಾರ ಆಗುತ್ತೀರಿ ಎಂದು ಹೆದರಿಸಿ ಆಂಗ್ಲ ಭಾಷೆಯ ಪತ್ರಕ್ಕೆ ರೈತರ ಸಹಿ ಪಡೆದು ಸಾಲ ನವೀಕರಣ ಮಾಡಲಾಗಿದೆ. ಇದರಿಂದ ರೈತರು ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಈ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.
ಕಳೆದ 3 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ತತ್ತರಿಸಿದ್ದಾರೆ. ಕೃಷಿ ಸಾಲ ಪಡೆದ ರೈತರು ಈಗ ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ರೂ. ಮನ್ನಾ ಮಾಡಿರುವ ಮಾದರಿಯಲ್ಲಿ ರೈತರ ಸಾಲವನ್ನೂ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿ ಮಾಡಬೇಕು. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಕೇಂದ್ರ ಸರ್ಕಾರ ಕೂಡಲೇ ಈ ಕಾನೂನು ಜಾರಿ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ರಾಜ್ಯ ಸರ್ಕಾರ ಭಿಕ್ಷೆಯ ರೂಪದಲ್ಲಿ 2,000 ರೂ. ಪರಿಹಾರ ನೀಡುವುದು ಬೇಡ. ಸಂಪೂರ್ಣ ಬೆಳೆ ನಷ್ಟ ಪರಿಹಾರಕ್ಕೆ ಕನಿಷ್ಠ 25,000 ರೂ. ನೀಡಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ರಫ್ತು ನಿಷೇಧ, ಎಥೆನಾಲ್ ಉತ್ಪಾದನೆಗೆ ತಡೆ ಹಾಕಿರುವ ಕೇಂದ್ರ ಸರ್ಕಾರದ ಕ್ರಮ ಕಬ್ಬು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತರಿಗೆ 60 ವರ್ಷ ಪೂರೈಸಿದ ಬಳಿಕ ತಿಂಗಳಿಗೆ ಕನಿಷ್ಠ 5000 ರೂ. ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಬೇಕು, ದೇಶದ ರೈತರ ಹಿತರಕ್ಷಣೆಗಾಗಿ ವಿಶ್ವ ವ್ಯಾಪಾರ ಒಪ್ಪಂದದಿಂದ ಕೇಂದ್ರ ಸರ್ಕಾರ ಹೊರ ಬರಬೇಕು ಎಂದು ಆಗ್ರಹಿಸಿದರು
ಪಂಜಾಬ್‌ನಲ್ಲಿ ಟನ್ ಕಬ್ಬಿಗೆ 4,000 ರೂ. ದರ ನಿಗದಿ ಮಾಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಎರಡ್ಮೂರು ಸಭೆಗಳಾದರೂ ಜಿಲ್ಲೆಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯನ್ನು ಮಣಿಸಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ತೂಕ, ಇಳುವರಿ ಮಾಪನ, ಹಣ ಪಾವತಿಯಲ್ಲಿ ಮೋಸ ಮಾಡುತ್ತಿದ್ದರೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಬಣ್ಣಾರಿ ಅಮ್ಮನ್ ಕಾರ್ಖಾನೆಯ ವಂಚನೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಯುವ ರೈತನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು. ರೈತರ ಮಕ್ಕಳು ಕೃಷಿಯಿಂದ ವಲಸೆ ಹೋಗುವುದನ್ನು ತಪ್ಪಿಸಬೇಕು. ಹತ್ತಾರು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಅಡೆತಡೆಗಳನ್ನು ನಿವಾರಿಸಿ ಕೂಡಲೇ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಅತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ವೆಂಕಟೇಶ್, ಹೆಗ್ಗುರು ರಂಗರಾಜು, ನೀಲಕಂಠಪ್ಪ, ವಾಜಮಂಗಲ ಮಹದೇವ ಇದ್ದರು.