ಎನ್‌ಇಪಿಯಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ: ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಸುಧೀರ್ ಶರ್ಮಾ ಹೇಳಿಕೆ

2
Published on

ಮಂಡ್ಯ: ಕೇಂದ್ರ ಸರ್ಕಾರ ದೇಶಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಾಲೆಗಳಲ್ಲಿ ಜಾರಿಗೊಳಿಸಿ ಜು.29ಕ್ಕೆ ಮೂರು ವರ್ಷ ತುಂಬುತ್ತಿದೆ. ಎನ್‌ಇಪಿಯಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಸುಧೀರ್‌ಶರ್ಮಾ ತಿಳಿಸಿದರು.

ರಾಷ್ಟ್ರಿಯ ಶಿಕ್ಷಣ ನೀತಿ ಪುಸ್ತಕದ ಕಲಿಕೆಗಿಂತ ರಚನಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಅನುವಾಗುವಂತೆ ವಿಷಯವನ್ನು ಮಕ್ಕಳಿಗೆ ತಿಳಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮಗ್ರ ಶಿಕ್ಷಣ ಕರ್ನಾಟಕ ಮಂಡ್ಯದ ಉಪಯೋಜನಾ ಸಮನ್ವಯಾಧಿಕಾರಿ ರೇಣುಕಮ್ಮ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಮೌಲ್ಯಾಧಾರಿತ, ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ರಾಷ್ಟ್ರೀಯ ಶಿಕ್ಷಣ ನೀತಿ ಉಪಯುಕ್ತವಾಗಿದೆ. ಇದು ಕಲಿಕಾತ್ಮಕ ಶಿಕ್ಷಣವೂ ಆಗಿದೆ. ಎನ್‌ಇಪಿಯಲ್ಲಿ ಸುಮಾರು 250 ಪುಟಗಳಷ್ಟು ಮಾಹಿತಿ ಆಧಾರಿತ ದಾಖಲೆಗಳೇ ಸಿಗುತ್ತವೆ. ಇದನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿದಾಗ ಮಗುವಿನ ಶಿಕ್ಷಣಕ್ಕೆ ಎಲ್ಲಿಯೂ ಕೊರತೆ ಆಗದಂತೆ ಹಾಗೂ ಇದು ಖಾಸಗಿ ಶಾಲೆ ಅಥವಾ ಅನುದಾನಿತ ಶಾಲೆ, ಸರ್ಕಾರಿ ಶಾಲೆ ಎಂಬ ಬೇಧವಿಲ್ಲದೇ ಮಗುವನ್ನು ಮಗುವಾಗಿ ನೋಡಿ ಉನ್ನತ ಶಿಕ್ಷಣ ನೀಡಿ ಕಲಿಕಾತ್ಮಕ ಶಿಕ್ಷಣ ನೀಡುವುದೇ ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.

ಮಗು ಹದಿನೆಂಟು ವರ್ಷ ತಲುಪುವ ವೇಳೆಗೆ ನಾನು ಯಾರು ಎಂಬುವ ಪ್ರಶ್ನೆ ಮಾಡಿಕೊಂಡು ಈ ಸಮಾಜಕ್ಕೆ ಏನು ಕೊಡುಗೆ ನೀಡಬೇಕೆನ್ನುವುದನ್ನು ಈ ಶಿಕ್ಷಣದಿಂದ ಏನು ಕಲಿತೆ ಎಂಬುವ ದಾಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು ಮಾಡುತ್ತದೆ. ಹಾಗೆಯೇ ಉದ್ಯೋಗಾವಕಾಶಗಳನ್ನು ಸಹ ಹೆಚ್ಚಾಗಿ ಮಾಡುವ ದೃಷ್ಟಿಯಿಂದ ಕಾಲೇಜು ಶಿಕ್ಷಣದಲ್ಲಿಯೇ ಐಟಿಐ, ಡಿಪ್ಲೊಮಾಗಳನ್ನು ಸೇರ್ಪಡೆ ಮಾಡಲಾಗಿದೆ. ವಿದ್ಯಾರ್ಥಿಗಳು ತನಗಿಷ್ಟಬಂದ ವಿಷಯವನ್ನು ತೆಗೆದುಕೊಳ್ಳಲು ಯಾವುದೇ ಕಟ್ಟು ಪಾಡು ಇರದ ರೀತಿ ಶಿಕ್ಷಣ ರೂಪಿಸಿರುವುದು ಸ್ವಾಗತಾರ್ಹವಾಗಿದೆ ಎಂಬುದು ತಿಳಿದು ಬರುತ್ತದೆ ಎಂದು ತಿಳಿಸಿದರು.

ಭಾರತೀಯ ಸಂಸ್ಕೃತಿಯನ್ನು ಉನ್ನತಗೊಳಿಸುವ ಶಿಕ್ಷಣವನ್ನು ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಿಫಾರಸು ಮಾಡಲಾಗಿದೆ. ಪಾಶ್ಚಿಮಾತ್ಯ ದೇಶದ ಸಂಸ್ಕಾರಕ್ಕೆ ಒತ್ತು ಕೊಡುವುದನ್ನು ಕಡೆಗಣಿಸಿ ಭಾರತದ ಸಂಸ್ಕೃತಿ, ಇತಿಹಾಸ, ಪರಂಪರೆ, ಐತಿಹಾಸಿಕ ಕಟ್ಟಡಗಳು ಹಾಗೂ ಜೀರ್ಣೋದ್ಧಾರ ಮಾಡುವ ಕೆಲಸವನ್ನು ಮಗುವಿಗೆ ಹಿರಿಯರು, ಕಿರಿಯರು, ಶಿಕ್ಷಕರ ಮೇಲಿನ ಗೌರವ, ಪ್ರಾಣಿಗಳಲ್ಲಿ ಅನುಕಂಪ ಸೇರಿದಂತೆ ಒಟ್ಟಾರೆಯಾಗಿ ಮಾನವೀಯ ಮೌಲ್ಯಗಳನ್ನು ಹೆಚ್ಚಾಗಿ ಮಕ್ಕಳಿಗೆ ಗುಣಾತ್ಮಕವಾಗಿ ಶಿಕ್ಷಣ ನೀಡಲು ಇದು ಸಹಕಾರಿಯಾಗಿದೆ ಎಂದರು.

ಟಯಟ್‌ನ ಭಾನುಕುಮಾರ್, ನವೋದಯ ಶಾಲೆ ಪ್ರಾಂಶುಪಾಲ ಉಮಾಪತಿರೆಡ್ಡಿ, ಮುಖ್ಯಶಿಕ್ಷಕಿ ವಿಶಾಲಾಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net