ತಾಂತ್ರಿಕ ಶಿಕ್ಷಣಕ್ಕೆ ಆಜಾದ್ ಕೊಡುಗೆ ಅಪಾರ

tippu polytechnic
Published on

ಹುಬ್ಬಳ್ಳಿ: ದೇಶದಲ್ಲಿ ಶಿಕ್ಷಣ ನೀತಿಯ ವಾಸ್ತುಶಿಲ್ಪಿಯಾಗಿದ್ದ ಮೌಲಾನಾ ಅಬುಲ್ ಕಲಂ ಆಜಾದ್ ಅವರು ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ದೇಶದಲ್ಲಿ ತಾಂತ್ರಿಕ ಶಿಕ್ಷಣ ಜಾರಿಯಾಗಬೇಕೆಂಬ ಬಯಕೆ ಅವರಿಗಿತ್ತು. ಅವರ ಪ್ರಯತ್ನದಿಂದಲೇ ಖರಗಪುರ ಐಐಟಿ ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು. ತಾಂತ್ರಿಕ ಶಿಕ್ಷಣದ ಬೆಳವಣಿಗೆಯಲ್ಲಿ ಆಜಾದ್​ರ ಕೊಡುಗೆ ಅಪಾರ ಎಂದು ನಿವೃತ್ತ ಪ್ರಾಚಾರ್ಯ ಎಂ.ಎಸ್. ಮುಲ್ಲಾ ಹೇಳಿದರು.

ನಗರದ ಟಿಪ್ಪು ಷಹೀದ ಪಾಲಿಟೆಕ್ನಿಕ್​ನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನ- ತಂತ್ರಜ್ಞಾನ, ಶಿಕ್ಷಣ, ಆಡಳಿತ, ಸಂಶೋಧನೆಗಳ ಕ್ಷೇತ್ರಗಳಲ್ಲಿ ಭಾರತ ಇಂದು ಅದ್ಭುತ ಪ್ರಗತಿ ಸಾಧಿಸಿದೆ. ಇದಕ್ಕೆ ಮೌಲಾನಾ ಅಬುಲ್ ಕಲಂ ಆಜಾದ ಅವರು ಹಾಕಿದ ಭದ್ರ ಬುನಾದಿಯೇ ಕಾರಣ ಎಂದರು.

ಹುಬ್ಬಳ್ಳಿಯ ನ್ಯೂ ಇಂಗ್ಲಿಷ ಪ್ರೌಢಶಾಲೆಯ ಮುಖ್ಯೋಧ್ಯಾಪಕ ಡಾ. ಕಿರಣಕುಮಾರ ನಾಯ್ಕ ಮಾತನಾಡಿ, ಆಜಾದ್ ಅವರು ವಿಶ್ವ ವಿದ್ಯಾಲಯ ಧನಸಹಾಯ ಆಯೋಗ ರಚಿಸುವುದರ ಮೂಲಕ ಉನ್ನತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರವೀಂದ್ರ ಸಿಂಗ್ ಅತ್ತೇರ ಮಾತನಾಡಿ, ಆಜಾದ್ ಅವರು ಎಐಸಿಟಿಇ, ಯುಜಿಸಿ, ಭಾರತೀಯ ವಿಜ್ಞಾನ ಸಂಸ್ಥೆ ಹೀಗೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಈ ಶತಮಾನ ಹೊಸ ಹೊಸ ಅನ್ವೇಷಣೆಗಳ ಮೂಲಕ ಬೆಳೆಯುತ್ತಿದೆ. ಸ್ವರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಕೌಶಲಗಳು ಅಗತ್ಯ ಎಂದರು.

ಚಂದ್ರಶೇಖರ ತುಪ್ಪದ, ಎಂ.ಎಸ್. ಸೋಮನಕಟ್ಟಿ, ಮಸೂದ ಅಹ್ಮದ ಜುನೇದ, ಎಂ.ಎಚ್. ಧಾರವಾಡ, ಇತರರು ಇದ್ದರು. ತಜಮುಲ್ಲಾ ಹುಸೇನ ಮೈಸೂರ ಸ್ವಾಗತಿಸಿದರುಕಿರಣಕುಮಾರ ಮಂಟೂರ ನಿರೂಪಿಸಿದರು. ಬಾಳೇಶ ಹೆಗ್ಗಣ್ಣವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net