ಮಾ.8ರಂದು ಜಂತುಹುಳು ನಿವಾರಣಾ ದಿನ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

National Deworming Day Celebration mandya
Published on

ಮಂಡ್ಯ: ಜಿಲ್ಲೆಯಲ್ಲಿ ಮಾ.8ರಂದು ಜಂತುಹುಳು ನಿವಾರಣಾ ದಿನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊದಲ ಹಂತವಾಗಿ ಫೆ.24ರಂದು ಪದವಿ ಪೂರ್ವ ಕಾಲೇಜು ಹಾಗೂ ಎರಡನೇ ಹಂತದಲ್ಲಿ ಫೆ.27ರಂದು 6 ರಿಂದ 19 ವರ್ಷದೊಳಗಿನ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರೆ ನೀಡಲಾಗಿದೆ. ಮೂರನೇ ಹಂತ ಮಾ.8ರಂದು 1 ರಿಂದ 5 ವರ್ಷದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಆಯೋಜಿಸಲಾಗುವುದು ಎಂದು ವಿವರಿಸಿದರು.

ಜಿಲ್ಲೆಯ ಎಲ್ಲ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಆಲ್ ಬೆಂಡಾಜೋಲ್ ಮಾತ್ರೆ ಸರಬರಾಜಾಗಿದೆ. ಜಂತುಹುಳು ನಿವಾರಣ ಕಾರ್ಯಕ್ರಮದಿಂದ ಶೇ.25ರಷ್ಟು ಮಕ್ಕಳ ಶಾಲಾ ಗೈರು ಹಾಜರಾತಿ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಪ್ಪದೇ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಿ. ಜಿಲ್ಲಾಮಟ್ಟದ ಉಗ್ರಾಣದಲ್ಲಿ ಔಷಧದ ಲಭ್ಯತೆ ಬಗ್ಗೆ ಖಚಿತಪಡಿಸಿಕೊಂಡು ತಾಲೂಕು ವೈದ್ಯಾಧಿಕಾರಿಗೆ ಮಾಹಿತಿ ನೀಡಬೇಕು. ಆಶಾಕಾರ್ಯಕರ್ತೆಯರು ಅಂಗನವಾಡಿಗೆ ದಾಖಲಾಗದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಮತ್ತು ಸೂಕ್ಷ್ಮ ಯೋಜನೆ ತಯಾರಿಸಿಕೊಂಡು ಮಾತ್ರೆ ನೀಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಉಪ ಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಮತ್ತು ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net