

ಮಂಡ್ಯ: ಭಾರತೀಯ ಸಂಸ್ಕೃತಿಯನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸಬೇಕಾದ ಸರ್ಕಾರಗಳು ಅಧಿಕಾರದ ಚುಕ್ಕಾಣಿಯ ಆಸೆಗೆ ಐದು ವರ್ಷಕ್ಕೊಮ್ಮೆ ಪಠ್ಯಗಳನ್ನು ಬದಲಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಇದರೊಂದಿಗೆ ನಮ್ಮ ದೇಸಿ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ವಿಫಲವಾಗಿವೆ ಎಂದು ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿವಿವೇಕಾನಂದ ರಂಗಮಂದಿರದಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಆಯೋಜಿಸಿದ್ದ 54ನೇ ರಾಷ್ಟ್ರೀಯ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾಷೆ, ಕಲೆ, ನೃತ್ಯ, ಸಂಗೀತವನ್ನು ಪ್ರೀತಿಸುವ ವಿದೇಶಿಗರು ಭಾರತೀಯ ಸಂಸ್ಕೃತಿಯತ್ತ ಒಲವು ತೋರುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತರಾಗಲು ನಮ್ಮನ್ನಾಳುವ ಪ್ರತಿನಿಧಿಗಳ ನಿರ್ಲಕ್ಷೃವೇ ಕಾರಣವಾಗಿದೆ. ಶಾಲಾ ಕಾಲೇಜುಗಳ ಪಠ್ಯದಲ್ಲಿ ದೇಸಿ ಕಲೆ, ಸಾಹಿತ್ಯ, ಸಂಸ್ಕೃತಿ, ನೃತ್ಯ, ಕ್ರೀಡೆಯನ್ನು ಅಳವಡಿಸಿದಾಗ ಭವಿಷ್ಯದ ಪೀಳಿಗೆಗೆ ಭಾರತೀಯ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ ಎಂದರು.
ನಗರಸಭೆ ಸದಸ್ಯ ನಾಗೇಶ್ ಮಾತನಾಡಿ, ಕಲೆಯ ತವರೂರು ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದ ನೃತ್ಯೋತ್ಸವ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.
ರಾಷ್ಟ್ರೀಯ ಕಬ್ಬಡಿ ಆಟಗಾರರಾದ ವಿನೋದ್‌ಕುಮಾರ್, ಪ್ರಕಾಶ್, ಸಂಪಾದಕರು ಮತ್ತು ವರದಿಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಸರಾಳು ಕುಮಾರಸ್ವಾಮಿ, ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಪ್ರಕಾಶ್ ಭಾರಧ್ವಾಜ್, ಸ್ವಾತಿ ಭಾರಧ್ವಾಜ್ ಇತರರಿದ್ದರು. ಕೇರಳ, ತಮಿಳುನಾಡು, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ನೃತ್ಯೋತ್ಸವದಲ್ಲಿ ಪಾಲ್ಗೊಂಡು ಜನಮನಸೂರೆಗೊಂಡರು.