ಸೆ.1ರಿಂದ ರಾಷ್ಟ್ರೀಯ ನೃತ್ಯ ಮಹೋತ್ಸವ

natyalaya
ಎಸ್.ಎನ್.ಚನ್ನಬಸಪ್ಪ ನೃತ್ಯ ಮಹೋತ್ಸವದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಹನಾ ಚೇತನ್, ಡಾ.ನಾಗಮಣಿ, ಚೇತನ್ ಮುಂತಾದವರಿದ್ದರು.
Published on

ಶಿವಮೊಗ್ಗ: ಸಹಚೇತನ ನಾಟ್ಯಾಲಯದಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಸೆ.1ರಿಂದ 3ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ನಾಟ್ಯಾರಾಧನಾ-12 ರಾಷ್ಟ್ರೀಯ ನೃತ್ಯ ಮಹೋತ್ಸವ ಏರ್ಪಡಿಸಲಾಗಿದೆ. ಇದರಲ್ಲಿ ಸಹಚೇತನ ಕಲಾವಿದರು, ದೆಹಲಿಯ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರೂ ನೃತ್ಯ ಪ್ರದರ್ಶಿಸಲಿದ್ದಾರೆ.

ಶಿವಮೊಗ್ಗ ಕಲಾಭಿಮಾನಿಗಳಿಗೆ ದೇಶ ವಿದೇಶದ ಕಲಾಪ್ರಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಾಟ್ಯಾಲಯದ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.1ರಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡುವರು. 3ರಂದು ಸಮಾರೋಪದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಪಾಲಿಕೆ ಸದಸ್ಯ ಪ್ರಭಾಕರ್ ಭಾಗವಹಿಸುವರು. 1ರಂದು ಸಂಜೆ ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳು ಚಿಂತಯಾಮಿ ಜಗದಂಬಾ ಎಂಬ ನೃತ್ಯರೂಪಕ ಪ್ರದರ್ಶಿಸುವರು. ನೃತ್ಯಗುರು ಸಹನಾ ಚೇತನ್ ಪರಿಕಲ್ಪನೆ ಹಾಗೂ ನಿರ್ದೇಶನ ಇದಕ್ಕಿದೆ. ನಾಟ್ಯಾಲಯದ 162 ವಿದ್ಯಾರ್ಥಿಗಳು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ವಿಶೇಷ ಎಂದರು.
2ರಂದು ಸಂಜೆ ಸಹನಾ ಚೇತನ್ ಅವರು ಹನುಮಂತ ದೇವ ನಮೋ ಏಕವ್ಯಕ್ತಿ ನೃತ್ಯರೂಪಕ ಪ್ರಸ್ತುತಪಡಿಸಲಿದ್ದಾರೆ. ಬಳಿಕ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಜಯ ಜಯ ವಿಶ್ವವಿಜಯೀ ಬಸವ ಎಂಬ ಬಸವಣ್ಣನವರ ವಚನಾಧಾರಿತ ನೃತ್ಯರೂಪಕ ಪ್ರದರ್ಶಿಸುವರು ಎಂದು ತಿಳಿಸಿದರು.
ನೃತ್ಯಗುರು ಸಹನಾ ಚೇತನ್, ಪ್ರಮುಖರಾದ ಚೇತನ್, ಮಾಲತೇಶ್, ಡಾ. ನಾಗಮಣಿ, ಆನಂದ್‌ರಾಮ್, ಸಿಂಧು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net